ಮ೦ಗಳೂರು: ಚಿನ್ನಾಭರಣದ ಅಂಗಡಿಯ ಕೆಲಸಗಾರನನ್ನು ಕಾರಿನಲ್ಲಿ ಅಪಹರಿಸಿಕೊಂಡುಹೋಗಿ ಹಲ್ಲೆ ನಡೆಸಿ ಚಿನ್ನದ ಗಟ್ಟಿಯನ್ನು ದರೋಡೆ ಮಾಡಿಕೊಂಡು ಹೋಗಿದ್ದ ಆರೋಪಿಗಳನ್ನು ಪೊಲೀಸರು ಬ೦ಧಿಸಿದ್ದಾರೆ.
ಕೋಟೆಕಾರು ಕೆ.ಸಿ.ರೋಡ್ ನ ಫಾರಿಶ್(18) , ಉಳ್ಳಾಲ ಮುಕ್ಕಚೇರಿಯ ಸಫ್ವಾನ್, ( 23 ) ,ಕೋಟೆಕಾರಿನ ಅರಾಫತ್ ಆಲಿ(18 ),ಉಳ್ಳಾಲದ ಫರಾಝ್,(19 ) ಹಾಗೂ ಅಪ್ರಾಪ್ತ ಬಾಲಕ
ಬ೦ಧಿತ ಆರೋಪಿಗಳು.
ಸೆ.26 ರಂದು ಮಂಗಳೂರು ಹಂಪನಕಟ್ಟೆಯಲ್ಲಿರುವ ಚಾಯ್ಸ್ ಗೋಲ್ಡ್ ಎಂಬ ಹೆಸರಿನ ಚಿನ್ನಾಭರಣದ ಅಂಗಡಿಯ ಕೆಲಸಗಾರ ಮುಸ್ತಾಫ ಎಂಬವರು ಸ್ಕೂಟರ್ ಸೀಟಿನ ಅಡಿಯಲ್ಲಿ ಚಿನ್ನದ ಗಟ್ಟಿಯನ್ನು ಇಟ್ಟುಕೊಂಡು ಹೋಗುತ್ತಿದ್ದಾಗ ರಾತ್ರಿ ಸುಮಾರು 8-45 ಗಂಟೆ ಸಮಯಕ್ಕೆ ಮಂಗಳೂರು ಕಾರ್ ಸ್ಟ್ರೀಟ್ ನ ರಸ್ತೆಯಲ್ಲಿ ಇಬ್ಬರು ಆರೋಪಿಗಳು ಸ್ಕೂಟರೊಂದರಲ್ಲಿ ಬಂದು ತಡೆದು ನಿಲ್ಲಿಸಿದ್ದು , ಇದೇ ವೇಳೆಗೆ ಉಳಿದ ಆರೋಪಿಗಳು ಕಾರೊಂದರಲ್ಲಿ ಬಂದು ಮುಸ್ತಾಫ ರವರನ್ನು ಕಾರಿನಲ್ಲಿ ಅಪಹರಿಸಿಕೊಂಡುಹೋಗಿ ಹಲ್ಲೆ ನಡೆಸಿ ಮಂಗಳೂರು ಎಕ್ಕೂರು ಎಂಬಲ್ಲಿ ಕಾರಿನಿಂದ ಇಳಿಸಿ ಚಿನ್ನದ ಗಟ್ಟಿಯನ್ನು ದರೋಡೆ ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿತ್ತು
ಈ ಪ್ರಕರಣದಲ್ಲಿ ಅಪ್ರಾಪ್ತ ಬಾಲಕ ಚಾಯ್ಸ್ ಗೋಲ್ಡ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದನು, ಇದೇ ಅಂಗಡಿಯಲ್ಲಿ ಈ ಹಿಂದೆ ಕೆಲಸ ಮಾಡಿಕೊಂಡಿದ್ದ ಫಾರಿಶ್ ಎಂಬಾತನಿಗೆ ಚಿನ್ನದ ಗಟ್ಟಿಯನ್ನು ಕೊಂಡುಹೋಗುವ ಮಾಹಿತಿ ನೀಡುವಂತೆ ತಿಳಿಸಿದ್ದ. ಇದರ೦ತೆ ಮುಸ್ತಾಫ ಅವರು ಚಿನ್ನದ ಗಟ್ಟಿಯನ್ನು ರಾತ್ರಿ 8-30 ಗಂಟೆಗೆ ತೆಗೆದುಕೊಂಡು ಹೋಗುವ ಸಂಧರ್ಭದಲ್ಲಿ ಅವರ ಚಲನವಲನದ ಮಾಹಿತಿಯನ್ನು ಆರೋಪಿ ಫಾರಿಶ್ ನಿಗೆ ನೀಡಿದ್ದು ಅದರಂತೆ ಈ ಆರೋಪಿಗಳು ಇತರ ಆರೋಪಿಗಳೊಂದಿಗೆ ಸೇರಿ ಚಿನ್ನದ ಗಟ್ಟಿಯನ್ನು ದರೋಡೆ ಮಾಡಲು ಪೂರ್ವಯೋಜಿತ ಸಂಚು ರೂಪಿಸಿದ್ದರು. ಆರೋಪಿ ಸಫ್ವಾನ್ ಕೃತ್ಯಕ್ಕೆ ಕಾರನ್ನು ಒದಗಿಸಿದ್ದು, ಮುಸ್ತಾಫರವರು ತನ್ನ ಸ್ಕೂಟರಿನ ಸೀಟಿನ ಅಡಿಯಲ್ಲಿ ಚಿನ್ನದ ಗಟ್ಟಿಯನ್ನು ಇಟ್ಟುಕೊಂಡು ಹೋಗುತ್ತಿದ್ದಾಗ ಆರೋಪಿಗಳಾದ ಅರಾಫತ್ ಆಲಿ ಮತ್ತು ಫರಾಝ್ ರವರು ಸುಜುಕಿ ಆಕ್ಸೆಸ್ ಸ್ಕೂಟರಿನಲ್ಲಿ ಬಂದು ಅಡ್ಡಗಟ್ಟಿದ್ದರು., ಇದೇ ಸಮಯ ಉಳಿದ ಆರೋಪಿಗಳು ಸಫ್ವಾನ್ ಒದಗಿಸಿದ ಬಿಳಿ ಬಣ್ಣದ ಕಾರೊಂದರಲ್ಲಿ ಬಂದು ಮುಸ್ತಾಫರವರನ್ನು ಬಲತ್ಕಾರವಾಗಿ ಕಾರಿನಲ್ಲಿ ಹಾಕಿ ಅಪಹರಿಸಿಕೊಂಡು ಹೋಗಿ ಹಲ್ಲೆ ಮಾಡಿ ಮಂಗಳೂರು ಎಕ್ಕೂರು ಎಂಬಲ್ಲಿ ಅವರನ್ನು ಕಾರಿನಿಂದ ಇಳಿಸಿ ಚಿನ್ನದ ಗಟ್ಟಿಯನ್ನು ದರೋಡೆ ಮಾಡಿಕೊಂಡು ಹೋಗಿದ್ದರು.
ಈ ಪ್ರಕರಣದಲ್ಲಿ ಕೃತ್ಯಕ್ಕೆ ಉಪಯೋಗಿಸಿದ ಸುಜುಕಿ ಆಕ್ಸೆಸ್ ಸ್ಕೂಟರನ್ನು ಸ್ವಾಧೀನಪಡಿಸಿಕೊಂಡಿದ್ದು ಉಳಿದ ಆರೋಪಿಗಳನ್ನು ದಸ್ತಗಿರಿ ಮಾಡಲು ಹಾಗೂ ಕೃತ್ಯಕ್ಕೆ ಬಳಸಿದ ಕಾರು ಮತ್ತು ಸೊತ್ತನ್ನು ಸ್ವಾಧೀನಪಡಿಸಿಕೊಳ್ಳಲು ಬಾಕಿ ಇರುತ್ತದೆ.
ಈ ಪ್ರಕರಣದ ಆರೋಪಿಗಳನ್ನು ಉಪ ಪೊಲೀಸ್ ಆಯುಕ್ತರು (ಅಪರಾಧ ಮತ್ತು ಸಂಚಾರ) ಮಂಗಳೂರು ನಗರ ಮತ್ತು ಸಹಾಯಕ ಪೊಲೀಸ್ ಆಯುಕ್ತರು, ಕೇಂದ್ರ ಉಪವಿಭಾಗ, ಸಹಾಯಕ ಪೊಲೀಸ್ ಆಯುಕ್ತರು, ಸಿಸಿಬಿ ಘಟಕ ಮಂಗಳೂರು ಅವರ ಮಾರ್ಗದರ್ಶನದಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣಾ ಅಧಿಕಾರಿ ಸಿಬ್ಬಂದಿಯವರು ಹಾಗೂ ಮಂಗಳೂರು ಸಿಸಿಬಿ ಘಟಕದ ಅಧಿಕಾರಿ ಸಿಬ್ಬಂದಿಯವರ ಜಂಟಿ ಕಾರ್ಯಾಚರಣೆ ನಡೆಸಿ ಬ೦ಧಿಸಿದ್ದರು.


