ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಮಂಗಳೂರು ತಾಲೂಕಿನ ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಳಲಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ರಾಣಿ ಅಬ್ಬಕ್ಕನ ಕುರಿತಾಗಿ ‘ಮಣೇಲ್‍ದ ಪೆರ್ಮೆ ರಾಣಿ ಅಬ್ಬಕ್ಕ’ ಎಂಬ ವಿಚಾರ ಕೂಟವನ್ನು ಸ್ಥಳೀಯ ರಾಣಿ ಅಬ್ಬಕ್ಕ ಚಾವಡಿಯ ಸಹಭಾಗಿತ್ವದಲ್ಲಿ ಡಿ.14 ರಂದು ಬೆಳಿಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಕೆ. ಚಿನ್ನಪ್ಪಗೌಡ ಅವರು ಉದ್ಘಾಟಿಸಲಿದ್ದು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಲಿದ್ದಾರೆ. ಅಬ್ಬಕ್ಕನ ಕುರಿತಾಗಿ ನಡೆಯುವ ಪ್ರಥಮ ಗೋಷ್ಠಿಯಲ್ಲಿ ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕಾರಾಮ ಪೂಜಾರಿ ‘ಅಬ್ಬಕ್ಕ ಚಾರಿತ್ರಿಕ ಅವಲೋಕನ’ ವಿಷಯದ ಬಗ್ಗೆ ಹಾಗೂ ಎರಡನೇ ಗೋಷ್ಠಿಯಲ್ಲಿ ಇತಿಹಾಸ ತಜ್ಞರು ಹಾಗೂ ನಿವೃತ್ತ ಉಪನ್ಯಾಸಕ ಡಾ.ಪುಂಡಿಕಾಯಿ ಗಣಪಯ್ಯ ಭಟ್ ‘ಮಣೇಲಿನಲ್ಲಿ ಪ್ರವಾಸಿ ಕಂಡ ಅಬ್ಬಕ್ಕ’ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.


