24.5 C
Karnataka
Thursday, April 30, 2026

ಮಂಗಳೂರು ಕರಾವಳಿಯನ್ನು ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ

ನವದೆಹಲಿ: ಭಾರತದ ಗ್ರೀನ್‌ ಎನರ್ಜಿ ಸ್ವಾವಲಂಬನೆ ಮತ್ತು ಬಂದರು ಆಧಾರಿತ ಅಭಿವೃದ್ಧಿ ಕಾರ್ಯತಂತ್ರವನ್ನು ದೃಷ್ಟಿಯಲ್ಲಿಟ್ಟುಕೊಂಡು ಮಂಗಳೂರು ಕಡಲ ತೀರದಲ್ಲಿ ‘ಕಡಲ ಪವನ ಶಕ್ತಿ’ (‘ಸಮುದ್ರ ತೀರದ ಪವನ ಶಕ್ತಿ’ Offshore Wind Energy) ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಲೋಕಸಭೆಯಲ್ಲಿ ನಿಯಮ 377ರ ಅಡಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಸಂಸದ ಕ್ಯಾ. ಚೌಟ ಅವರು, ಕಡಲನಗರಿ ಮಂಗಳೂರು ಸಮುದ್ರ ತೀರದ ಪವನ ಶಕ್ತಿ ಉತ್ಪಾದನೆಗೆ ವಿಪುಲ ಅವಕಾಶವಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್ ಓಷಿಯಾನೋಗ್ರಫಿ (NIO) ವರದಿಯನ್ನು ಉಲ್ಲೇಖಿಸಿ, ಭಾರತದ ಭರವಸೆಯ ಕಡಲ ಪವನ ಇಂಧನ ‘ವಲಯ-2ರಲ್ಲಿ ಮಂಗಳೂರು ಕರಾವಳಿ’ ಗುರುತಿಸಿಕೊಂಡಿದ್ದು, ಮಂಗಳೂರು ಕರಾವಳಿಯು ಸುಮಾರು 6,490 ಚ.ಕಿಮೀ. ಪ್ರದೇಶವು ಪವನ ಇಂಧನ ಉತ್ಪಾದನೆಗೆ ಹೆಚ್ಚು ಪೂರಕವಾಗಿದೆ. ಇಲ್ಲಿ ಭೂಕಂಪನ, ಚಂಡಮಾರುತ ಮುಂತಾದ ನೈಸರ್ಗಿಕ ವಿಕೋಪಗಳ ಅಪಾಯ ಕಡಿಮೆ ಇರುವುದರಿಂದ ದೀರ್ಘಕಾಲದ ಪವನ ಇಂಧನ ಯೋಜನೆಗಳ ಸ್ಥಾಪನೆಗೆ ಅತ್ಯಂತ ಸೂಕ್ತ ಹಾಗೂ ಸುರಕ್ಷಿತ ಪ್ರದೇಶವಾಗಿದೆ. ಹೀಗಾಗಿ, ಮಂಗಳೂರು ಕಡಲ ತೀರವನ್ನು ಪವನ ಶಕ್ತಿ ಉತ್ಪಾದನೆ ತಾಣವಾಗಿ ಅಭಿವೃದ್ಧಿಪಡಿಸಬೇಕೆಂದು ಕ್ಯಾ. ಚೌಟ ಅವರು ಹೇಳಿದ್ದಾರೆ.

ನವ ಮಂಗಳೂರು ಬಂದರಿನ ಕಾರ್ಯತಂತ್ರದ ಪ್ರಯೋಜನವನ್ನು ಒತ್ತಿ ಹೇಳಿದ ಕ್ಯಾ. ಚೌಟ ಅವರು, ಅತ್ಯುತ್ತಮ ಮೂಲಸೌಕರ್ಯ, ಬಹು ಬರ್ತ್‌ಗಳು, ಹೆಚ್ಚಿನ ಸರಕು ನಿರ್ವಹಣಾ ಸಾಮರ್ಥ್ಯ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳು ಈ ಬಂದರಿನಲ್ಲಿದೆ. ವಿಂಡ್ ಟರ್ಬೈನ್‌ಗಳಂತಹ ಬೃಹತ್ ಯಂತ್ರೋಪಕರಣಗಳ ಸಾಗಣೆ ಮತ್ತು ಜೋಡಣೆಗೆ ಇಲ್ಲಿ ಪೂರಕ ವ್ಯವಸ್ಥೆಯಿದೆ. ಇದು ಕಡಲ ಪವನ ಇಂಧನ ಯೋಜನೆಗಳ ನಿರ್ವಹಣೆಗೆ ಒಂದು ಪ್ರಮುಖ ಲಾಜಿಸ್ಟಿಕ್‌ ನೆಲೆಯನ್ನಾಗಿ ಪರಿವರ್ತಿಸಬಹುದು ಎಂದು ಅಭಿಪ್ರಾಯಪಟ್ಟರು.

ಎಂಆರ್ ಪಿಎಲ್, ಒಎಂಪಿಎಲ್ , ಯುಪಿಸಿಎಲ್ ಮತ್ತು ಮಂಗಳೂರು ಎಸ್‌ಇಝಡ್ (MSEZ) ನಂತಹ ಬೃಹತ್ ಕೈಗಾರಿಕೆಗಳ ಕೇಂದ್ರವಾಗಿರುವುದರಿಂದ, ಇಲ್ಲಿ ತಯಾರಾಗುವ ಗ್ರೀನ್ ಎನರ್ಜಿಗೂ ಸ್ಥಳೀಯವಾಗಿಯೇ ದೊಡ್ಡ ಮಟ್ಟದ ಮಾರುಕಟ್ಟೆ ಲಭ್ಯವಿದೆ. ಹೀಗಾಗಿ ಕಡಲ ಪವನ ಶಕ್ತಿಯ ಉತ್ಪಾದನೆಯಾಗುವ ವಿದ್ಯುತ್‌ನ್ನು ನೇರವಾಗಿ ಮಾರಾಟ ಮಾಡಲು ಸುಲಭವಾಗುತ್ತದೆ. ಇವುಗಳೊಂದಿಗೆ ನೇರ ವಿದ್ಯುತ್ ಖರೀದಿ ಒಪ್ಪಂದಗಳನ್ನು ಮಾಡಿಕೊಳ್ಳುವ ಮೂಲಕ ಯೋಜನೆಯ ಆರ್ಥಿಕ ಸುಸ್ಥಿರತೆಯನ್ನು ಕಾಪಾಡಿಕೊಳ್ಳಬಹುದು ಮತ್ತು ತ್ವರಿತ ಅನುಷ್ಠಾನಕ್ಕೂ ಇದು ಸಹಕಾರಿ ಎಂದು ಕ್ಯಾ. ಚೌಟ ಪ್ರತಿಪಾದಿಸಿದ್ದಾರೆ.

ಕರ್ನಾಟಕಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಿದ್ದು, 2025ರ ಆರಂಭದಲ್ಲಿ ರಾಜ್ಯದ ಗರಿಷ್ಠ ವಿದ್ಯುತ್ ಬೇಡಿಕೆಯು 18,000 ಮೆಗಾವ್ಯಾಟ್ ದಾಟಿದ್ದು, ಇಂಥಹ ಸಂದರ್ಭದಲ್ಲಿ ಪರ್ಯಾಯ ಇಂಧನ ಉತ್ಪಾದಿಸುವ ಪವನ ಶಕ್ತಿಯನ್ನು ಉತ್ತೇಜಿಸುವ ಅಗತ್ಯವಿದೆ. ಕರ್ನಾಟಕದ ಕರಾವಳಿಯಲ್ಲಿ ಗಾಳಿಯ ವೇಗವು ತುಲನಾತ್ಮಕವಾಗಿ ಕಡಿಮೆ ಇದ್ದರೂ, ಅರಬ್ಬಿ ಸಮುದ್ರದಲ್ಲಿ ಕಡಲಾಚೆಯ ಗಾಳಿ ಇಂಧನ ಅಭಿವೃದ್ಧಿಪಡಿಸುವುದು ದಕ್ಷಿಣ ಭಾರತದ ಇಂಧನ ಭದ್ರತೆಗೆ ಅತ್ಯಗತ್ಯವಾಗಿದೆ. ಜೊತೆಗೆ ಬಂಗಾಳ ಕೊಲ್ಲಿಯು ಸದಾ ಚಂಡಮಾರುತದ ಭೀತಿ ಎದುರಿಸುತ್ತಿರುವುದರಿಂದ, ಅರಬ್ಬಿ ಸಮುದ್ರದ ಈ ವಲಯವು ಪವನ ಶಕ್ತಿಯ ಬಲವರ್ಧನೆಗೆ ಹೆಚ್ಚು ಸುರಕ್ಷಿತವಾಗಿದೆ ಎಂದು ಹೇಳಿದ್ದಾರೆ.

2030ರ ವೇಳೆಗೆ 500 GW ನವೀಕರಿಸಬಹುದಾದ ಇಂಧನ ಉತ್ಪಾದಿಸುವ ಭಾರತದ ಗುರಿಯನ್ನು ತಲುಪಲು ಮಂಗಳೂರು ಪವನ ಶಕ್ತಿ ಉತ್ಪಾದನಾ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ತಕ್ಷಣವೇ ಸಂಪನ್ಮೂಲಗಳ ಮೌಲ್ಯಮಾಪನ, ಯೋಜನೆಗಳ ಪ್ರಾಯೋಗಿಕ ಅನುಷ್ಠಾನ ಮತ್ತು ಕೈಗಾರಿಕಾ ಸಮಾಲೋಚನೆಗಳನ್ನು ನಡೆಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ನವೀಕರಿಸಬಹುದಾದ ಇಂಧನ ಸಚಿವಾಲಯವನ್ನು ಸಂಸದ ಕ್ಯಾ. ಚೌಟ ಅವರು ಸದನದಲ್ಲಿ ಆಗ್ರಹಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles