ಮಂಗಳೂರು: “ಜಯಕಿರಣ ಫಿಲಂಸ್ ಲಾಂಛನದಲ್ಲಿ , ಪ್ರಕಾಶ್ ಪಾಂಡೇಶ್ವರ್ ನಿರ್ಮಾಣದಲ್ಲಿ ಹಾಗೂ ಕೆ. ಸೂರಜ್ ಶೆಟ್ಟಿ ನಿರ್ದೇಶನದಲ್ಲಿ ಅದ್ಭುತವಾಗಿ ಸಿದ್ಧಗೊಂಡಿರುವ ನಾನ್ ವೆಜ್ ತುಳು ಸಿನಿಮಾ ಫೆಬ್ರವರಿ 6 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ, ಈ ಸಿನಿಮಾವನ್ನು ಎಲ್ಲ ಮಲ್ಟಿಪ್ಲೆಕ್ಸ್‌ನಲ್ಲೂ ಕೇವಲ 99 ರೂ.ಗೆ ನೋಡಬಹುದಾಗಿದೆ.
ದುಬಾರಿ ಟಿಕೆಟ್ ಕೊಟ್ಟು ಸಿನಿಮಾ ನೋಡಲು ಸಾಧ್ಯವಾಗದವರು ಇಂಥದ್ದೊಂದು ಸುಂದರ ಹಾಗೂ ಅತ್ಯುತ್ತಮ ಸಿನಿಮಾವನ್ನು ನೋಡದೆ ಇರಬಾರದು ಎಂಬ ಉದ್ದೇಶದಿಂದ ಕೇವಲ 99 ರೂ. ಟಿಕೆಟ್ ನಿಗದಿಪಡಿಸಿದ್ದು, ಇದು ತುಳುಚಿತ್ರರಂಗದಲ್ಲಿ ಒಂದು ಹೊಸ ಸಂಚಲನ ಉಂಟು ಮಾಡಿದೆ. ಸಿಂಗಲ್ ಥಿಯೇಟರ್‌ಗಿಂತಲೂ ಕಡಿಮೆ ದರದಲ್ಲಿ ಈ ಸಿನಿಮಾವನ್ನು ತುಳು ಪ್ರೇಮಿಗಳು ಮಲ್ಟಿಫ್ಲೆಕ್ಸ್ ಗಳಲ್ಲಿ ನೋಡುವಂತಹ ಅವಕಾಶ ಇದಾಗಿದೆ“ ಎಂದು ಚಿತ್ರದ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
”ಕರಾವಳಿಯ ಪ್ರತಿಭೆಗಳಿಂದಲೇ ಸಿದ್ಧವಾಗಿರುವ ನಾನ್‌ವೆಜ್ ಒಂದು ಅತ್ಯುತ್ತಮ ಹಾಗೂ ಭಿನ್ನ ಕಥಾವಸ್ತುವನ್ನು ಹೊಂದಿದೆ. ಸು ಫ್ರಂ ಸೋ ಸಿನಿಮಾದ ಹೆಚ್ಚಿನ ಕಲಾವಿದರು ನಾನ್‌ವೆಜ್ ಸಿನಿಮಾದಲ್ಲೂ ಇದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಪ್ರಕಾಶ್ ತೂಮಿನಾಡು, ಬಾವ ಬಂದರು ಖ್ಯಾತಿಯ ಪುಷ್ಪರಾಜ್ ಬೊಳ್ಳೂರು, ದೀಪಕ್ ರೈ ಪಾಣಾಜೆ, ಮೈಮ್ ರಾಮದಾಸ್, ವಿಸ್ಮಯ ವಿನಾಯಕ್, ರೂಪಾ ವರ್ಕಾಡಿ ನಟಿಸಿದ್ದಾರೆ. ನಾಯಕಿಯಾಗಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಖ್ಯಾತಿಯ ಸಂಜನಾ ಬುರ್ಲಿ ತಮ್ಮ ಅದ್ಭುತ ನಟನಾ ಕೌಶಲವನ್ನು ಪ್ರದರ್ಶಿಸಿ ದ್ದಾರೆ. ಜತೆಗೆ ಕುಸೇಲ್ದರಸೆ ನವೀನ್ ಡಿ. ಪಡೀಲ್ ಪ್ರಮುಖ ಪಾತ್ರದಲ್ಲಿದ್ದಾರೆ. ಈಗಾಗಲೇ ಕೆಲವು ತುಳು, ಕನ್ನಡ ಸಿನಿಮಾಗಳಲ್ಲಿ ನಟಿಸಿ ಭರವಸೆಯ ನಾಯಕ ನಟ ಎಂದೇ ಗುರುತಿಸಿಕೊಂಡಿರುವ ಅಥರ್ವ ಪ್ರಕಾಶ್ ಪ್ರಮುಖ ಪಾತ್ರದಲ್ಲಿದ್ದಾರೆ“ ಎಂದವರು ಹೇಳಿದರು.
ಚಿತ್ರದ ನಿರ್ದೇಶಕ ಸೂರಜ್ ಶೆಟ್ಟಿ ಮಾತನಾಡಿ ”ಚಿತ್ರದಲ್ಲಿ ಹಾಸ್ಯಕ್ಕೆ ಯಾವುದೇ ಕೊರತೆಯಿಲ್ಲ, ಮನೋರಂಜನೆಯೂ ಕಡಿಮೆ ಇಲ್ಲ, ಸಂದೇಶ – ಕಥೆಯೂ ಅದ್ಭುತವಾಗಿದೆ. ಎಂದು ಹೇಳಿದರು. ನಾಯಕನಟ ಅಥರ್ವ ಪ್ರಕಾಶ್ ಮಾತಾಡಿ, ”ನಾನ್‌ವೆಜ್ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಇದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ ಎಂದರು.
ಈ ಸಿನಿಮಾದಲ್ಲಿ ಬಾಲ್ಯದಲ್ಲಿ ಎಲ್ಲರೂ ಅನುಭವಿಸಿದ ಸನ್ನಿವೇಶಗಳ ಗುಚ್ಛಗಳಿವೆ. ಆದ್ದರಿಂದ ಇದೊಂದು ಎಲ್ಲರ ಜೀವನದ ನಿಜಕಥೆ ಎಂದೇ ಹೇಳಬಹುದು. ಮಂಗಳೂರಿನ ಪ್ರತಿಭೆ ಅಥರ್ವ ಪ್ರಕಾಶ್ ಅವರ ಮನಸ್ಪರ್ಶಿ ಅಭಿನಯ, ನಾಯಕಿ ಸಂಜನಾ ಬುರ್ಲಿ ಅವರ ಆಕರ್ಷಕತೆ, ಹಾಸ್ಯದಲ್ಲಿ ಕಚಗುಳಿ ಇಡುವ ದೀಪಕ್ ರೈ ಪಾಣಾಜೆ, ಪ್ರಕಾಶ್ ತೂಮಿನಾಡ್, ಪುಷ್ಪರಾಜ್ ಬೊಳ್ಳಾರ್, ವಿಸ್ಮಯ ವಿನಾಯಕ್ ಹಾಸ್ಯ, ನವೀನ್ ಡಿ ಪಡೀಲ್, ರೂಪಾ ವರ್ಕಾಡಿ ಇವರೆಲ್ಲರೂ ಈ ಸಿನಿಮಾದಲ್ಲಿರುವುದು ನಿರೀಕ್ಷೆ ದುಪ್ಪಟ್ಟಾಗಲು ಮತ್ತೊಂದು ಪ್ರಮುಖ ಕಾರಣ. ಅಂದ ಹಾಗೆ ಫೆ. 6ರಂದು ಬಿಡುಗಡೆಯಾಗಲಿರುವ ಈ ಸಿನಿಮಾವನ್ನು ಮಲ್ಟಿಪ್ಲೆಕ್ಸ್‌ನಲ್ಲೂ ಕೇವಲ 99 ರೂಪಾಯಿಗೆ ನೋಡಬಹುದು. ಇದು ಸಿನಿಮಾ ಪ್ರಿಯರಿಗೆ ಚಿತ್ರತಂಡದ ಉಡುಗೊರೆ.


