ಮ೦ಗಳೂರು: ಮಂಗಳೂರಿನ ಖ್ಯಾತ ಕೊಂಕಣಿ ಸಾಹಿತಿ / ಪತ್ರಕರ್ತ ಎಚ್.ಎಂ. ಪೆರ್ನಾಲ್ (ಹೆನ್ರಿ ಮೆಂಡೋನ್ಸಾ) ಅವರಿಗೆ 2025 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಇದು ಅವರ ಪ್ರಶಂಸಿತ ಸಾಹಿತ್ಯ ವಿಮರ್ಶೆ ಕೃತಿಯಾದ ಕೊಂಕಣಿ ಕಾವ್ಯೆಂ: ರುಪಾಂ ಆನಿ ರೂಪಕಾಂ (2021) ಗೆ ನೀಡಲಾಗಿದೆ. ಸಾಹಿತ್ಯ ಅಕಾಡೆಮಿ ಪ್ರಶಸ್ತಿಯು ಭಾರತ ಸರಕಾರ ಸಾಹಿತ್ಯಕ್ಕಾಗಿ ನೀಡುವ ದೇಶದ ಅತ್ಯುನ್ನತ ಪ್ರಶಸ್ತಿಯಾಗಿದ್ದು, ಪ್ರತೀ ವರ್ಷ 22 ಅನುಸೂಚಿತ ಭಾಷೆಗಳ ಜೊತೆಗೆ ಇಂಗ್ಲಿಷ್ ಮತ್ತು ರಾಜಸ್ಥಾನಿ ಹೀಗೆ 24 ಭಾಷೆಗಳ ಉತ್ಕೃಷ್ಟ ಕೃತಿಗಳನ್ನು ಆಯ್ದು ಈ ಪುರಸ್ಕಾರ ನೀಡಲಾಗುತ್ತದೆ.

ಈ ಹಿಂದೆ ಮಂಗಳೂರಿನ ಚಾ. ಫ್ರಾ. ದೆಕೊಸ್ತಾ (1992) ಮತ್ತು ಮೆಲ್ವಿನ್ ರೊಡ್ರಿಗಸ್(2011) – ಕವನ ಸಂಕಲನಗಳಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದರೆ, 2016 ರಲ್ಲಿ ಎಡ್ವಿನ್ ಜೆ.ಎಫ್.ಡಿ. ಸೊಜಾ ಕಾದಂಬರಿಗಾಗಿ – ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದರು. ಎಚ್. ಎಂ. ಪೆರ್ನಾಲ್ ಅವರು ಈ ಪರಂಪರೆಯನ್ನು ಮುಂದುವರೆಸುತ್ತಿರುವ ಕರ್ನಾಟಕದ ನಾಲ್ಕನೇ ಕೊಂಕಣಿ ಸಾಹಿತಿಯಾಗಿದ್ದಾರೆ.
ಪೆರ್ನಾಲ್ ಅವರ ಪ್ರಸ್ತುತ ಕೊಂಕಣಿ ಕಾವ್ಯೆಂ: ರುಪಾಂ ಆನಿ ರೂಪಕಾಂ ಕೃತಿಯು ಸಾಹಿತ್ಯ ವಿಮರ್ಶೆ ವಿಭಾಗದಲ್ಲಿ ಪ್ರಶಸ್ತಿ ಪಡೆದ ಮೊದಲ ಕೊಂಕಣಿ ಕೃತಿ ಎಂಬ ಐತಿಹಾಸಿಕ ಮೈಲುಗಲ್ಲನ್ನು ಸೃಷ್ಟಿಸಿದೆ. ಈ ಕೃತಿಗೆ ಮೊದಲು 2021 ರಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಉತ್ತಮ ಪುಸ್ತಕ ಪ್ರಶಸ್ತಿ ಮತ್ತು 2023 ರಲ್ಲಿ ಗೋವಾ ಕೊಂಕಣಿ ಅಕಾಡೆಮಿಯಿಂದ ಉತ್ತಮ ಪುಸ್ತಕ ಪ್ರಶಸ್ತಿ ಲಭಿಸಿತ್ತು. ಈ ಪುಸ್ತಕಕ್ಕೆ ಜ್ಞಾನಪೀಠ ಪ್ರಶಸ್ತಿ ವಿಜೇತ ಕೊಂಕಣಿ ಸಾಹಿತಿ ದಾಮೋದರ್ ಮೌಜೋ ಅವರ ವಿಸ್ತೃತ ಮುನ್ನುಡಿ ಬರೆದಿದ್ದು, ಮಂಗಳೂರಿನ ಕವಿತಾ ಪಬ್ಲಿಕೇಷನ್ಸ್ ಈ ಪುಸ್ತಕವನ್ನು ಪ್ರಕಟಿಸಿದ್ದಾರೆ.
ಉಡುಪಿ ಜಿಲ್ಲೆಯ ಪೆರ್ನಾಲ್ ನಲ್ಲಿ ಹುಟ್ಟಿ, ಶಿರ್ವದ ಹಿಂದೂ ಜೂನಿಯರ್ ಕಾಲೇಜು ಮತ್ತು ಎಂ.ಎಸ್.ಆರ್.ಎಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ, ಮುಂಬಯಿಯಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆದಿರುವ ಹೆನ್ರಿ ಮೆಂಡೋನ್ಸಾ ವೃತ್ತಿಯಲ್ಲಿ ಕಮರ್ಶಿಯಲ್ ಎಕಾಂವ್ಟೆಂಟ್. ಕನ್ನಡದಲ್ಲಿ – ತರಂಗ, ಸಂಕ್ರಮಣ,ಶೂದ್ರ ಮುಂತಾದ ಪತ್ರಿಕೆಗಳ ಮೂಲಕ ಬರವಣಿಗೆ ಆರಂಭಿಸಿದ ಅವರು 1980 ರ ದಶಕದ ಆರಂಭದಲ್ಲಿ ಯುವಕ್ ಮಾಸಪತ್ರಿಕೆಯಲ್ಲಿ ವ್ಯಂಗ್ಯಚಿತ್ರಕಾರರಾಗಿ ಕೊಂಕಣಿಗೆ ಪಾದಾರ್ಪಣೆ ಮಾಡಿ ಪ್ರಸ್ತುತ – ಕಥೆಗಾರ, ಕವಿ, ವಿಮರ್ಶಕ, ಸಂಪಾದಕ, ಪ್ರಕಾಶಕರಾಗಿ ತಮ್ಮದೇ ಛಾಪು ಮೂಡಿಸಿರುತ್ತಾರೆ. 2011 ರಲ್ಲಿ ಅವರು ಸ್ಥಾಪಿಸಿದ ಕಿಟಾಳ್ ಸಾಹಿತ್ಯಿಕ ಅಂತರ್ಜಾಲ ಪತ್ರಿಕೆ ಹಿರಿ – ಕಿರಿಯ ಲೇಖಕರನ್ನೊಳಗೊಂಡು ಸತತ ಹದಿನಾಲ್ಕನೇ ವರ್ಷದಲ್ಲಿ ನಿರಂತರವಾಗಿ ಪ್ರಕಟವಾಗುತ್ತಿದ್ದು, ಡಿಜಿಟಲ್ ಕೊಂಕಣಿ ಸಾಹಿತ್ಯ ನಿರ್ಮಿತಿಯಲ್ಲಿ ಮುಂಚೂಣಿಯಲ್ಲಿದೆ. 2013 ರಲ್ಲಿ ಪಾಕ್ಷಿಕವಾಗಿ ಆರಂಭಿಸಿದ ಆರ್ಸೊ ಸಾಹಿತ್ಯ ಪತ್ರಿಕೆ ಪ್ರಸ್ತುತ ಕವಿ ವಿಲ್ಸನ್ ಕಟೀಲ್ ಸಂಪಾದಕತ್ವದಲ್ಲಿ ಮಾಸಪತ್ರಿಕೆಯಾಗಿ ಹನ್ನೆರಡನೇ ವರ್ಷದಲ್ಲಿ ಪ್ರಕಟವಾಗುತ್ತಿದ್ದು, ಆರ್ಸೊ ವಾರ್ಷಿಕ ವಿಶೇಷಾಂಕಗಳಿಗೆ ಸಾಹಿತ್ಯ ವಿಶ್ವದಲ್ಲಿ ವಿಶೇಷ ಮಾನ್ಯತೆಯಿದೆ. ತಮ್ಮದೇ ಕಿಟಾಳ್ ಪ್ರಕಾಶನ ದ ಮೂಲಕ ಈ ವರೆಗೆ 15 ಕ್ಕೂ ಮಿಕ್ಕಿ ಮೌಲಿಕ ಸಾಹಿತ್ಯ ಕೃತಿಗಳನ್ನೂ ಪೆರ್ನಾಲ್ ಪ್ರಕಟಿಸಿದ್ದಾರೆ.
ಈ ವರೆಗೆ ಪೆರ್ನಾಲ್ ಅವರ ನಾಲ್ಕು ಕವನ ಸಂಕಲನಗಳು — ಚಲ್ಯಾಂಕ್ ಚತ್ರಾಯ್ (1999), ಕಯ್ದ್ಯಾಚ್ಯೊ ಕವಿತಾ (2004), ಭಾಮುಣಾಂಚೆಂ ಚೆಡುಂ (2006) ಮತ್ತು ಜನೆಲ್ (2025), ಎರಡು ಕಥಾ ಸಂಕಲನಗಳು — ದೆವಾಕ್ ಸೊಡುಲ್ಲೊ ಪಾಡೊ(2002) ಮತ್ತು ಬೀಗ್ ಆನಿ ಬಿಗಾತ್ (2016) ಹಾಗೂ ಪ್ರಶಸ್ತಿ ವಿಜೇತ ಸಾಹಿತ್ಯ ವಿಮರ್ಶೆಯ ಕೃತಿ ಕೊಂಕಣಿ ಕಾವ್ಯೆಂ : ರುಪಾಂ ಆನಿ ರೂಪಕಾಂ (2021) ಪ್ರಕಟವಾಗಿವೆ.


