ಮ೦ಗಳೂರು>:ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್, ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕೋಲಜಿ (M.I.O), ಮಂಗಳೂರು ಇವರ ಸಹಯೋಗದಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ 20 ಪ್ರಶ್ನೆಗಳನ್ನೊಳಗೊಂಡ ಸಮಗ್ರ ಕ್ಯಾನ್ಸರ್ ಜಾಗೃತಿ ಮನೆ-ಮನೆ ಸಮೀಕ್ಷೆ ನಡೆಸಲಾಗಿದೆ.
ಈ ಸಮೀಕ್ಷೆಯಲ್ಲಿ ಗೃಹಿಣಿಯರು, ವಿದ್ಯಾರ್ಥಿಗಳು, ಕಾರ್ಮಿಕರು, ವೃತ್ತಿಪರರು, ವ್ಯಾಪಾರಿಗಳು ಮತ್ತು ಇನ್ನಿತರ ಸಮುದಾಯದವರು ಸೇರಿ 10,000ಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ. ಈ ಸಮೀಕ್ಷೆ ಕ್ಯಾನ್ಸರ್ ತಡೆಗಟ್ಟುವಿಕೆ ಹಾಗೂ ಆರಂಭಿಕ ಪತ್ತೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಜಾಗೃತಿ, ಇರುವ ತಪ್ಪು ಕಲ್ಪನೆಗಳು ಮತ್ತು ಪ್ರಮುಖ ಅಡೆತಡೆಗಳ ಕುರಿತು ಮಹತ್ವದ ಒಳನೋಟಗಳನ್ನು ಒದಗಿಸುತ್ತಿದೆ.
ಸಮೀಕ್ಷೆಯ ವರದಿಯ ಪ್ರಕಾರ ಸಾರ್ವಜನಿಕರಲ್ಲಿ ಕ್ಯಾನ್ಸರ್ ಬಗ್ಗೆ ಮೂಲಭೂತ ಜಾಗೃತಿ ಉತ್ತಮ ಮಟ್ಟದಲ್ಲಿದೆ ಎಂದು ಕಂಡುಬಂದಿದೆ. ಈ ಸಮೀಕ್ಷೆಯಲ್ಲಿ 90% ಕ್ಕಿಂತ ಹೆಚ್ಚು ಪ್ರತಿಕ್ರಿಯೆದಾರರು ತಂಬಾಕು ಸೇವನೆಯು ಕ್ಯಾನ್ಸರ್ಗೆ ಕಾರಣವಾಗುತ್ತಿದೆ ಎಂಬುದನ್ನು ಅರಿತುಕೊಂಡಿದ್ದಾರೆ. ಇನ್ನು ಬಹುತೇಕರು ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಿದರೆ ಚಿಕಿತ್ಸೆಯು ಹೆಚ್ಚು ಫಲಕಾರಿ ಮತ್ತು ಬದುಕುಳಿಯುವ ಸಾಧ್ಯತೆಯು ಅಧಿಕ ಎಂದು ಅರಿತಿದ್ದಾರೆ. ಜೊತೆಗೆ, ಕ್ಯಾನ್ಸರ್ ಒಂದು ಸಾಂಕ್ರಾಮಿಕರಹಿತ ರೋಗ , ಅದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದಿಲ್ಲ ಎಂಬ ಅರಿವು ಕೂಡ ಜನರಲ್ಲಿ ವ್ಯಾಪಕವಾಗಿದೆ. ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ಸಾರ್ವಜನಿಕ ಜಾಗೃತಿ ಅಭಿಯಾನಗಳ ಪರಿಣಾಮ ಈ ಭಾಗದ ಜನರಲ್ಲಿ ಜಾಗೃತಿ ಹೆಚ್ಚಿರುವುದು ಕಂಡುಬರುತ್ತಿದೆ.
ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಆರಂಭಿಕ ಪತ್ತೆಯ ಅಗತ್ಯತೆಯನ್ನು ಸಾಮಾನ್ಯ ಜನತೆ ಮತ್ತು ಸರ್ಕಾರದ ಗಮನಕ್ಕೂ ತರುವ ಉದ್ದೇಶದಿಂದ, “ಕ್ಯಾನ್ಸರ್ ಜಾಗೃತಿಯಲ್ಲಿ ಭರವಸೆಯ ಹೊಸ ಮುನ್ನುಡಿ” 10,000+ ಮನೆಗಳ ಕ್ಯಾನ್ಸರ್ ಜಾಗೃತಿ ಸಮೀಕ್ಷೆ – ದಕ್ಷಿಣ ಕನ್ನಡ ಜಿಲ್ಲೆ ಎಂಬ ಸಮೀಕ್ಷಾ ವರದಿ ಪುಸ್ತಕವನ್ನು ಮಂಗಳೂರಿನ ಪಂಪ್ವೆಲ್ನಲ್ಲಿರುವ M.I.O ನಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮವು ಡಾ. ಸುರೇಶ್ ರಾವ್, ಅಧ್ಯಕ್ಷರು ಮತ್ತು ವ್ಯವಸ್ಥಾಪಕ ಟ್ರಸ್ಟಿ, ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್ ಹಾಗೂ ನಿರ್ದೇಶಕರು, M.I.O ಇವರ ಅಧ್ಯಕ್ಷತೆಯಲ್ಲಿ ನಡೆಯಿತು, ಮುಖ್ಯ ಅತಿಥಿಯಾಗಿ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ’ಸೋಜಾ ಹಾಗೂ ಡೈಜಿವರ್ಲ್ಡ್ ಮೀಡಿಯಾ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ವಾಲ್ಟರ್ ನಂದಳಿಕೆ ಉಪಸ್ಥಿತರಿದ್ದರು. ಜೊತೆಗೆ ಗಣ್ಯ ಅತಿಥಿಗಳು, ವೈದ್ಯರು, ಆರೋಗ್ಯ ತಜ್ಞರು, ಸಮಾಜದ ಮುಖಂಡರು, ಸಮೀಕ್ಷೆಯಲ್ಲಿ ಭಾಗವಹಿಸಿದವರು ಮತ್ತು ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ಸಮೀಕ್ಷಾ ವರದಿಯನ್ನು ಕರ್ನಾಟಕ ಸರ್ಕಾರ ಹಾಗೂ ಸಂಬಂಧಿತ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಲ್ಲಿಸಲಾಗುತ್ತಿದ್ದು, ತನ್ಮೂಲಕ ಆರಂಭಿಕ ಪತ್ತೆ ಮತ್ತು ಕ್ಯಾನ್ಸರ್ ತಡೆಗಟ್ಟುವ ಆರೋಗ್ಯ ಸೇವೆಗಳನ್ನು ವಿಸ್ತರಿಸುವ ನೀತಿಗಳು ಮತ್ತು ಕ್ರಮಗಳಿಗೆ ಮಾರ್ಗದರ್ಶನ ನೀಡುತ್ತವೆ ಎಂಬ ನಿರೀಕ್ಷೆಯಿದೆ.
ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕೋಲಜಿ (M.I.O): ಕರಾವಳಿ ಕರ್ನಾಟಕದ ಕ್ಯಾನ್ಸರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿದ್ದು 2011ರಲ್ಲಿ ಮಂಗಳೂರಿನಲ್ಲಿ ಸ್ಥಾಪನೆಯಾಯಿತು. ಇದು ಆಸ್ಪತ್ರೆಗಳು ಮತ್ತು ಆರೋಗ್ಯ ಪೂರೈಕೆದಾರರ ರಾಷ್ಟ್ರೀಯ ಮಾನ್ಯತಾ ಮಂಡಳಿಯಿಂದ (NABH) ಮಾನ್ಯತೆ ಪಡೆದಿದೆ. ಡಾ. ಸುರೇಶ್ ರಾವ್ (ಅಧ್ಯಕ್ಷರು ಮತ್ತು ವ್ಯವಸ್ಥಾಪಕ ಟ್ರಸ್ಟಿ, ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್ ಹಾಗೂ ನಿರ್ದೇಶಕರು, M.I.O) ಅವರು ಸ್ಥಾಪಿಸಿದ ಎಂ.ಐ.ಓ, ಇಂದು ಸುಧಾರಿತ ತಂತ್ರಜ್ಞಾನ ಮತ್ತು ಆಂಕೋಲಜಿ (ಅರ್ಬುದ ಸಂಬಂಧಿ) ತಜ್ಞರ ತಂಡದೊಂದಿಗೆ ಮಂಗಳೂರಿನ ಪಂಪ್ವೆಲ್ ಮತ್ತು ಕರಂಗಲ್ಪಾಡಿಯಲ್ಲಿ 120 ಹಾಸಿಗೆಗಳ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಯಾಗಿ ಬೆಳೆದಿದ್ದು, ವಿಶ್ವದರ್ಜೆಯ, ಕೈಗೆಟುಕುವ ಆರೈಕೆಯನ್ನು ಹಾಗೂ ಸಮಗ್ರ ಆಂಕೋಲಜಿ ಸೇವೆಗಳನ್ನು ನೀಡುತ್ತಿದೆ.


