ಮ೦ಗಳೂರು: ರೈತ ಕುಡ್ಲ ಪ್ರತಿಷ್ಠಾನ, ಸಿರಿ ತೋಟಗಾರಿಕೆ ಸಂಘ ಮಂಗಳೂರು ಮತ್ತು ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು ಸಹಯೋಗದೊಂದಿಗೆ ಗೇರು – ಮಾವು-ಹಲಸು ಮೇಳ ಮೇ 8, 9,10 ರಂದು ಕದ್ರಿ ಪಾರ್ಕ್ ನಲ್ಲಿ ನಡೆಯಲಿದೆ.
ಬೆಳಗ್ಗೆ 9ರಿಂದ ರಾತ್ರಿ 8 ವರೆಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಇರಲಿದೆ.
ಸಕ್ಕರೆ, ನೀರು ಬೆರೆಸದ ತಾಜಾ ಗೇರು ಹಣ್ಣಿನ ಜ್ಯೂಸ್, ಗೇರು ಹಣ್ಣಿನ ಬೆಲ್ಲ,ಐಸ್ ಕ್ರೀಂ, ಉಪ್ಪಿನ ಕಾಯಿ, ಬರ್ಫಿ, ಕ್ಯಾಶ್ಯು ಆಪಲ್ ಮಫಿನ್ಸ್, ಸ್ವಾಶ್, ಹಲ್ವ, ಶೀರಾ, ಪಾಯಸ, ಗೇರು ಬೀಜದ ಮೊಳಕೆ, ಬಿಸ್ಕತ್ತು, ಸುಕಾಜು ಇನ್ನೂ ಹಲವಾರು ಗೇರು ಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ. ನಗರದಲ್ಲೂ ಬೆಳೆಸಬಹುದಾದ ಗೇರು ಸಸಿಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.
ಗೇರು ಹಣ್ಣಿನ ಜಾಗೃತಿ ಮೂಡಿಸಲು ಮಂಗಳೂರಿನಲ್ಲಿ ಪ್ರಥಮ ಬಾರಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.
ಗೇರು ಹಣ್ಣಿನ ಮೌಲ್ಯವರ್ಧನೆ ಉತ್ತೇಜನ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
60ಕ್ಕೂ ಅಧಿಕ ಬಗೆಯ ತಳಿಗಳ ಮಾವು ಪ್ರದರ್ಶನ ಮತ್ತು ಮಾರಾಟ ಇರಲಿದೆ. ರಾಮನಗರ, ಅಂಕೋಲ, ಕೋಲಾರ ಮೊದಲಾದೆಡೆಯಿಂದ ರೈತರು ಭಾಗಿಯಾಗಿ ನೇರ ಮಾರಾಟ ಕೈಗೊಳ್ಳುವರು. ವಿವಿಧ ತಳಿಗಳ ಹಲಸಿನ ಮಾರಾಟ ಇರಲಿದೆ.
ಮೇ 8ರಂದು ಬೆಳಗ್ಗೆ 11 ಗಂಟೆಗೆ ಅಡಿಕೆ ಪತ್ರಿಕೆ ಸಂಪಾದಕ, ಗೇರು ಹಣ್ಣು ಮೌಲ್ಯವರ್ಧನೆಯ ರೂವಾರಿ ಪಡ್ರೆ ಕಾರ್ಯಕ್ರಮ ಉದ್ಘಾಟಿಸುವರು. ಸಿರಿತೋಟಗಾರಿಕೆ ಸಂಘದ ಉಪಾಧ್ಯಕ್ಷೆ ಡಾ.ಭಾರತಿ ನಿರ್ಮಲ್, ಸಾವಯವ ಕೃಷಿಕ ಗ್ರಾಹಕ ಬಳಗದ ಕಾರ್ಯದರ್ಶಿ ರತ್ನಾಕರ ಕುಳಾಯಿ, ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿ ಕಾರ್ಯಕಾರಿ ಸದಸ್ಯರಾದ ಜಗನ್ನಾಥ ಗಾಂಭೀರ್, ಜಿ.ಕೆ. ಭಟ್, ರಾಮ ಮೊಗರೋಡಿ, ರೈತಕುಡ್ಲ ಪ್ರತಿಷ್ಠಾನದ ಅಧ್ಯಕ್ಷ ಭರತ್ ರಾಜ್ ಸೊರಕೆ, ಕಾರ್ಯದರ್ಶಿ ಲತೀಶ್ ಉಪಸ್ಥಿತರಿರುವರು.


