ಮಂಗಳೂರು: ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ವಿವಿಧ ನೀರು ಸರಬರಾಜು ಯೋಜನೆಗಳ ಪೂರ್ಣಗೊಳ್ಳಲು ಬಾಕಿ ಇರುವ ಕಾಮಗಾರಿಗಳನ್ನು ಗುರುತಿಸಿ ನಿಗಧಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಾಡೆ ವಿನಾಯಕ್ ಕಾರ್ಭಾರಿ ಸೂಚಿಸಿದರು.
ಅವರು ಬುಧವಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನಲ್ಲಿ ನಡೆದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನೀರಿನ ಶುದ್ಧೀಕರಣ ಘಟಕದ ನಿರ್ಮಾಣ ಪ್ರಗತಿಯನ್ನು ತ್ವರಿತಗೊಳಿಸಬೇಕು. ಯಾವುದೇ ಅಡಚಣೆಯಾದಲ್ಲಿ ತಕ್ಷಣವೇ ಬಗೆಹರಿಸಲು ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ಅವರು ಪಿ.ವಿ.ಟಿ.ಜಿ ಜೆ.ಜೆ.ಎಮ್, ಹರ್ ಘರ್ ಜಲ್, ಟಾಸ್ಕ್ ಫೋರ್ಸ್ ವರ್ಕ್, ಜಲಜೀವನ್ ಮಿಷನ್ ಸೇರಿದಂತೆ ವಿವಿಧ ನೀರು ಸರಬರಾಜು ಯೋಜನೆಗಳ ಪ್ರಗತಿ ಪರಿಶೀಲಿಸಿದರು.
ಬಾಕಿ ಇರುವ ಕಾಮಗಾರಿಗಳನ್ನು ಆದ್ಯತೆ ಮೇಲೆ ಪೂರ್ಣಗೊಳಿಸುವಂತೆ ಅವರು ನಿರ್ದೇಶಿಸಿದರು. ನೀರು ಸರಬರಾಜು ಕಾಮಗಾರಿಗಳನ್ನು ನಿರ್ವಹಿಸುವಲ್ಲಿ ಯಾವುದೇ ವಿಳಂಬ ಮಾಡಬಾರದು ಎಂದು ಹೇಳಿದರು. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದರು.
ಸಭೆಯಲ್ಲಿ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.


