ಸುರತ್ಕಲ್: “ಕರಾವಳಿಯಲ್ಲಿ 17,000 ಕೋಟಿ ರೂ. ಮೊತ್ತದ ಯೋಜನೆಯಲ್ಲಿ ಸದ್ಯ 3,000 ಕೋಟಿ ರೂ. ವಿನಿಯೋಗದಲ್ಲಿ ಕಾಮಗಾರಿಗಳು ನಡೆದಿವೆ. ನದಿ ಮತ್ತು ಸೇತುವೆಯಲ್ಲಿ ಪೈಪ್ ಅಳವಡಿಸಲು ತಾಂತ್ರಿಕ ಸಮಸ್ಯೆಗಳು ಎದುರಾಗಿವೆ. ಮುಂದಿನ ಮೂರು ತಿಂಗಳಲ್ಲಿ ಮನೆ ಮನೆಗೆ ಗೇಲ್ ಇಂಡಿಯಾ ಗ್ಯಾಸ್ ಪೂರೈಕೆ ಮಾಡಲಿದೆ” ಎಂದು ಗೇಲ್ ಇಂಡಿಯಾದ ಆರ್ಥಿಕ ವಿಭಾಗ ನಿರ್ದೇಶಕ ರಾಕೇಶ್ ಕುಮಾರ್ ಜೈನ್ ಹೇಳಿದರು.
ಅವರು ಸುರತ್ಕಲ್ ನ ವಿಜಯ ಫ್ಯೂಲ್ ಪಾರ್ಕ್ ನಲ್ಲಿ 22ನೇ ಸಿಎನ್ ಜಿ ಸ್ಟೇಷನ್ ಗೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತಾಡಿದರು.
ಹೆಚ್ ಪಿಸಿಲ್ ರಿಟೇಲ್ ವಿಭಾಗದ ಡಿಜಿಎಂ ನವೀನ್ ಕುಮಾರ್ ಮಾತನಾಡಿ, “ಮಂಗಳೂರಿನಲ್ಲಿ ಪ್ರಪ್ರಥಮ ಆನ್ ಲೈನ್ ಸಿಎನ್ ಜಿ ಸ್ಟೇಷನ್ ಸುರತ್ಕಲ್ ನಲ್ಲಿ ಪ್ರಾರಂಭಗೊಂಡಿರುವುದು ಸಂತಸದ ವಿಚಾರ. ಹೆಚ್ ಪಿಸಿ ಎಲ್ ಸಹಯೋಗದಲ್ಲಿ ಸಿಎನ್ ಜಿ ಸ್ಟೇಷನ್ ಶುಭಾರಂಭಗೊಂಡಿದೆ. ಇದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ. ಇಲ್ಲಿ ವರ್ಷದ ಹಿಂದೆ ಪ್ರಾರಂಭಗೊಂಡಿರುವ ಫ್ಯೂಲ್ ಸ್ಟೇಷನ್ ಹೆಚ್ಚಿನ ಮಾರಾಟ ದಾಖಲೆಯನ್ನು ನಿರ್ಮಿಸಿದೆ. ಇಲ್ಲಿ ಪೆಟ್ರೋಲ್, ಡೀಸೆಲ್, ಪವರ್, ಸಿಎನ್ ಜಿ ಎಲ್ಲವೂ ಒಂದೇ ಕಡೆಯಲ್ಲಿದೆ. ಇದರಿಂದ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಿದೆ” ಎಂದರು.
ಈ ಸಂದರ್ಭದಲ್ಲಿ ಗೇಲ್ ಗ್ಯಾಸ್ ಸಿಜಿಎಂ ಹೃದೇಶ್ ಕುಮಾರ್, ಸಿಎಫ್ ಓ ಪಂಕಜ್ ಕುಮಾರ್ ಗುಪ್ತ, ಸಂಸ್ಥೆಯ ಮಾಲಕ ದಯಾನಂದ ಶೆಟ್ಟಿ, ಕಾರ್ಪೋರೇಟರ್ ಶ್ವೇತಾ ಪೂಜಾರಿ, ಸಾಯಿ ಶಂಕರ್ ಬಿ., ರಿತೇಶ್ ಕುಮಾರ್,ಪ್ರಶಾಂತ್ ಮುಡಾಯಿಕೋಡಿ, ರಾಜೇಶ್ ಮುಕ್ಕ, ಶಿವಪ್ರಸಾದ್ ಶೆಟ್ಟಿ, ಸುಧಾಕರ ಪೂಂಜ ಮತ್ತಿತರರು ಉಪಸ್ಥಿತರಿದ್ದರು.