34.4 C
Karnataka
Friday, May 1, 2026

ಮಹಾನಗರ ಪಾಲಿಕೆ: ಲೋಕಾಯುಕ್ತದಿ೦ದ ಪರಿಶೀಲನೆ, ಹಲವಾರು ನ್ಯೂನ್ಯತೆಗಳು ಪತ್ತೆ

ಮ೦ಗಳೂರು: ಮಂಗಳೂರು ಲೋಕಾಯುಕ್ತ ಪೊಲೀಸರು ಮಂಗಳೂರು ಮಹಾನಗರ ಪಾಲಿಕೆಗೆ ಜೂ.21 ರಂದು ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದ್ದು, ಪರಿಶೀಲನೆ ವೇಳೆ ಪಾಲಿಕೆಯ ಕಂದಾಯ ವಿಭಾಗ, ಆರೋಗ್ಯ ವಿಭಾಗ, ಎಂಜಿನಿಯರ್ ವಿಭಾಗ, ಲೆಕ್ಕ ಪತ್ರ ವಿಭಾಗ. ನಗರ ಯೋಜನಾ ವಿಭಾಗ, ಆಯುಕ್ತರ ಕಚೇರಿಯಲ್ಲಿ ಕಡತ ವಿಲೇವಾರಿಯಲ್ಲಿ ಹಲವಾರು ನ್ಯೂನ್ಯತೆಗಳು ಕಂಡುಬಂದಿದೆ.

ಮಂಗಳೂರು ಲೋಕಾಯುಕ್ತ ಕಚೇರಿಯ ಪೊಲೀಸ್ ಉಪಾಧೀಕ್ಷಕರಾದ ಡಾ.ಗಾನ ಪಿ ಕುಮಾರ್, ಸುರೇಶ್ ಕುಮಾರ್ ಪಿ ಹಾಗೂ ಪೊಲೀಸ್ ನಿರೀಕ್ಷಕರಾದ ಭಾರತಿ ಜಿ, ಚಂದ್ರಶೇಖರ್ ಕೆ.ಎನ್ ಮತ್ತು ಉಡುಪಿ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ, ರಾಜೇಂದ್ರ ನಾಯ್ಕ್ ಎಂ.ಎನ್. ಅವರು ಮಂಗಳೂರು ಮತ್ತು ಉಡುಪಿ ಲೋಕಾಯುಕ್ತ ಪೊಲೀಸ್ ಠಾಣೆಯ ಸಿಬ್ಬಂದಿಯವರೊಂದಿಗೆ ಮಂಗಳೂರು ಮಹಾನಗರ ಪಾಲಿಕೆಗೆ ಲೋಕಾಯುಕ್ತರಿಂದ ಸರ್ಚ್ ವಾರಂಟ್ ಪಡೆದು ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಕಂದಾಯ ಮತ್ತು ನಗರ ಯೋಜನಾ ವಿಭಾಗದ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ಬ್ರೋಕರ್ ಒಬ್ಬರು ಬಳಿ 5 ಲಕ್ಷ ರೂ ಹಣ ಪತ್ತೆಯಾಗಿರುತ್ತದೆ. ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅಧಿಕಾರಿಯೊಬ್ಬರು ನಿವೃತ್ತರಾಗಿ 15 ವರ್ಷ ಕಳೆದರು ಕೂಡ ಇಲ್ಲಿಯವರೆಗೆ ಅದೇ ಹುದ್ದೆಯಲ್ಲಿ ಮುಂದುವರೆದಿದ್ದಾರೆ. ಇದು ಮಹಾನಗರ ಪಾಲಿಕೆಯ ಆಡಳಿತಾತ್ಮಕ ದುಷ್ಕೃತ್ಯದ ಸ್ಪಷ್ಟ ನಿದರ್ಶನವನ್ನು ಪ್ರತಿಬಿಂಬಿಸುತ್ತದೆ. ಆರೋಗ್ಯ ವಿಭಾಗದಲ್ಲಿ ಹಲವಾರು ಉದ್ದಿಮೆ ಪರವಾನಿಗೆಯ ಕಡತಗಳು ಎಂಸಿಸಿ ಟ್ರೇಡ್ ಲೈಸನ್ಸ್ ವೆಬ್‌ಸೈಟ್‌ನಲ್ಲಿ ಬಾಕಿ ಇರುವುದು ಕಂಡುಬಂದಿರುತ್ತದೆ. ವ್ಯಾಪಾರ ಪರವಾನಿಗೆಗಳನ್ನು ನವೀಕರಿಸಿರುವುದಿಲ್ಲ ಮತ್ತು ಅದಕ್ಕೆ ಅನುಗುಣವಾದ ಶುಲ್ಕವನ್ನು ಸಂಗ್ರಹಿಸಿರುವುದಿಲ್ಲ. ಎಂಜಿನಿಯರ್ ವಿಭಾಗದಲ್ಲಿನ ಹಳೆಯ ಕಡತಗಳನ್ನು ಬಾಕಿ ಇರಿಸಿರುವುದು ಕಂಡುಬಂದಿರುತ್ತದೆ. ಲೆಕ್ಕ ಪತ್ರ ವಿಭಾಗದಲ್ಲಿ ಕಾಲಮಿತಿಯೊಳಗೆ ಬಿಲ್‌ಗಳನ್ನು ವಿಲೇವಾರಿಗೊಳಿಸದೆ ಬಾಕಿ ಇರಿಸುವುದು ಕಂಡುಬ೦ದಿದೆ.

ನಗರ ಯೋಜನಾ ವಿಭಾಗದಲ್ಲಿ ಕಟ್ಟಡ ಪರವಾನಿಗೆ ನೀಡುವ ಸಮಯ ಯಾವುದೇ ನಿಬಂಧನೆಗಳನ್ನು ಪಾಲಿಸದೇ ಪರವಾನಿಗೆಯನ್ನು ನೀಡುತ್ತಿರುತ್ತಾರೆ ಬಿಲ್ಡಿಂಗ್ ಬೈ ಲಾ ನಿಯಮಗಳನ್ನು ಉಲ್ಲಂಘಿಸಿದ ಕಟ್ಟಡಗಳಿಗೆ ಡೆಮೋಲೀಷನ್ ಆರ್ಡರ್ ಹೊರಡಿಸಿದ್ದರು, ಆದರೆ ಟೌನ್ ಪ್ಲಾನಿಂಗ್ ವಿಭಾಗದ ಇಂಜಿನಿಯರ್ ಗಳು ಮತ್ತು ಆಯುಕ್ತರು ಬಿಲ್ಡಿಂಗ್ ಬೈ ಲಾ ನಿಯಮಗಳನ್ನು ಉಲ್ಲಂಪಿಸಿದ ಕಟ್ಟಡಗಳಿಗೆ ಕಾನೂನುಬಾಹಿರವಾಗಿ ಅನುಮತಿ ನೀಡಿರುವುದಾಗಿ ಮಾಹಿತಿ ಇರುತ್ತದೆ.

ನಗರದ ಒಳಚರಂಡಿ ಮೇಲುಸ್ತುವಾರಿ ವಿಭಾಗದ ಅಧಿಕಾರಿಗಳಾದ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಒಳಚರಂಡಿ ವಿಭಾಗದ ಅಧಿಕಾರಿಗಳು ನಗರದ ರಾಜ ಕಾಲುವೆ, ತೋಡುಗಳಿಗೆ ಕಟ್ಟಡಗಳಿಂದ ನೀರು ಅನಧಿಕೃತವಾಗಿ ಹರಿಯಲು ಅವಕಾಶ ಮಾಡಿಕೊಟ್ಟು ಇದರ ಉಲ್ಲಂಘನೆಯ ಕುರಿತು ಯಾವುದೇ ಕ್ರಮ ಕೈಗೊಳ್ಳದೇ ಮಳೆಗಾಲದ ಸಮಯದಲ್ಲಿ ಹಲವಾರು ಪ್ರದೇಶಗಳಲ್ಲ ಚರಂಡಿಯ ನೀರು ಜನವಸತಿ ಪ್ರದೇಶಗಳಿಗೆ ಹರಿದು ಹೋಗಿ ಅನಾರೋಗ್ಯಕರವಾದ ವಾತಾವರಣ ಸೃಷ್ಟಿಮಾಡಿರುತ್ತಾರೆ ಎಂದು ಮಾಹಿತಿ ತಿಳಿದು ಬಂದಿದೆ. ಎಸ್‌ಟಿಪಿ ಮತ್ತು ವೆಟ್‌ವೆಲ್‌ ಗಳ ನಿರ್ವಹಣೆಯನ್ನು ಸರಿಯಾದ ರೀತಿಯಲ್ಲಿ ನಡೆಸದೇ, ಅಸ್ತಿತ್ವದಲ್ಲಿರುವ ಯುಜಿಡಿ ನೆಟ್‌ವರ್ಕ್‌ಗೆ 25 ಗಿಂತ ಹೆಚ್ಚಿನ ಯುನಿಟ್‌ ಗಳಿರುವ ಅಪಾರ್ಟ್‌ ಮೆಂಟ್ ಕಾಂಪ್ಲೆಕ್ಸ್‌ಗಳಿಂದ ಹೊರಬರುವ ಕೊಳಚೆ ನೀರನ್ನು ಸಂಸ್ಕರಿಸುವ ಸಾಮರ್ಥ್ಯ ಇಲ್ಲದೇ ಇದ್ದರೂ ಹಲವಾರು ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್‌ಗಳಿಗೆ ಎಸ್ ಟಿಪಿ ನಿರ್ಮಿಸಲು ಒತ್ತಾಯಿಸದೆ ಅನುಮತಿ ನೀಡಿರುವುದಾಗಿ ಮಾಹಿತಿ ಇರುತ್ತದೆ. ನದಿಗಳ ಹಾಗೂ ತೋಡುಗಳ ಮಾಲಿನ್ಯತೆಗೆ ಕಟ್ಟಡ ನಿರ್ಮಾಣ ಸಮಯ ಯುಜಿಡಿಗೆ ಸಂಬಂಧಿಸಿದ ಷರತ್ತುಗಳನ್ನು ಪಾಲನೇ ಮಾಡಲು ಒತ್ತಾಯಿಸದೆ ನಿರ್ಲಕ್ಷತನ ತೋರಿರುವುದಾಗಿ ಮಾಹಿತಿ ತಿಳಿದು ಬಂದಿರುತ್ತದೆ. ಈ ಬಗ್ಗೆ ಸಮಗ್ರ ವರದಿಯನ್ನು ಲೋಕಾಯುಕ್ತ ಕೇಂದ್ರ ಕಚೇರಿಗೆ ಸಲ್ಲಿಸಲಾಗುವುದು ಎಂದು ಕರ್ನಾಟಕ ಲೋಕಾಯುಕ್ತ, ಮಂಗಳೂರು ಪೊಲೀಸ್ ಅಧೀಕ್ಷಕ(ಪ್ರಭಾರ) ಕುಮಾರಚಂದ್ರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles