ದಕ್ಷಿಣ ಕನ್ನಡ ಜಿಲ್ಲೆ: “ನಮ್ಮ ಸಂಸ್ಕೃತಿ ಯಾವಾಗಲೂ ವಿಶ್ವ ಸಹೋದರತ್ವ, ವಿಶ್ವ ಕಲ್ಯಾಣ, ವಿಶ್ವ ಶಾಂತಿ, ಸಮಾನತೆ ಮತ್ತು ಸಾಮರಸ್ಯವನ್ನು ಪ್ರೇರೇಪಿಸುತ್ತದೆ. ಪ್ರಪಂಚದಾದ್ಯಂತದ ಅನೇಕ ದೇಶಗಳು ಆಧ್ಯಾತ್ಮಿಕ ಮತ್ತು ಮಾನಸಿಕ ಯೋಗಕ್ಷೇಮಕ್ಕಾಗಿ ಭಾರತದತ್ತ ನೋಡುತ್ತಿದೆ” ಎಂದು ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.
ಶ್ರೀ ಕೋದಂಡರಾಮ, ಪಂಚಮುಖಿ ಆಂಜನೇಯ ಕ್ಷೇತ್ರ, ಹನುಮಾನಗಿರಿ ದೇವಸ್ಥಾನದ ಗೋಪುರ ಮತ್ತು ಮಂಟಪದ ಉದ್ಘಾಟನೆ ಮತ್ತು ಬ್ರಹ್ಮಕಲಶೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. “ಭಾರತೀಯ ಸಂಸ್ಕೃತಿಯು ಪ್ರಕೃತಿಯನ್ನು ಪವಿತ್ರವೆಂದು ಪರಿಗಣಿಸುತ್ತದೆ – ನದಿಗಳು, ಪರ್ವತಗಳು, ಮರಗಳು, ಪ್ರಾಣಿಗಳು ಮತ್ತು ಪಕ್ಷಿಗಳು ಎಲ್ಲವೂ ಜೀವನ ಚಕ್ರದ ಭಾಗವಾಗಿದೆ. ಇಂದಿನ ಪರಿಸರ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಈ ವಿಧಾನವು ಹೆಚ್ಚು ಪ್ರಸ್ತುತವಾಗಿದೆ ಮತ್ತು ಸುಸ್ಥಿರ ಅಭಿವೃದ್ಧಿಯ ತತ್ವಗಳಿಗೆ ಅನುಗುಣವಾಗಿದೆ” ಎಂದರು.
“ಈ ತಾಣವು ಧಾರ್ಮಿಕ ತಾಣ ಮಾತ್ರವಲ್ಲದೆ ಭಕ್ತರಿಗೆ ಆಧ್ಯಾತ್ಮಿಕ ಶಾಂತಿ ಮತ್ತು ಸ್ಫೂರ್ತಿಯ ಮೂಲವಾಗಿದೆ ಮತ್ತು ಸಮುದಾಯಕ್ಕೆ ಸಾಂಸ್ಕೃತಿಕ ಮತ್ತು ಸಾಮಾಜಿಕ ಸ್ಫೂರ್ತಿಯ ಕೇಂದ್ರವಾಗಿದೆ. ತ್ರೇತಾಯುಗದಲ್ಲಿ, ಹನುಮನು ಸಂಜೀವಿನಿ ಪರ್ವತವನ್ನು ಹೊತ್ತೊಯ್ಯುತ್ತಿದ್ದಾಗ, ಪರ್ವತದ ಒಂದು ಭಾಗವು ಇಲ್ಲಿ ಬಿದ್ದಿದೆ ಎಂದು ನಂಬಲಾಗಿದೆ. ಆ ಸ್ಥಳವು ಇಂದು ಹನುಮಗಿರಿ ಎಂದು ಪ್ರಸಿದ್ಧವಾಗಿದೆ. ಹನುಮಗಿರಿಯು ಭಗವಾನ್ ಶ್ರೀ ರಾಮ ಮತ್ತು ಹನುಮಂತ ನಡುವಿನ ವಿಶಿಷ್ಟ ಬಾಂಧವ್ಯವನ್ನು ಸಂಕೇತಿಸುತ್ತದೆ. ಇದನ್ನು ಕರ್ನಾಟಕದ “ದಕ್ಷಿಣ ಅಯೋಧ್ಯೆ” ಎಂದೂ ಪರಿಗಣಿಸಲಾಗಿದೆ. ಈ ಪವಿತ್ರ ಭೂಮಿ ಭಗವಾನ್ ಶ್ರೀ ರಾಮನ ಆದರ್ಶಗಳು ಮತ್ತು ಹನುಮಂತ ಜಿಯ ಅಚಲ ಭಕ್ತಿಯನ್ನು ಸಂಕೇತಿಸುತ್ತದೆ” ಎಂದು ಹೇಳಿದರು.
ಸಮಾರಂಭದಲ್ಲಿ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಅಶೀವ೯ಚನ ನೀಡಿದರು. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ,ಮಾಜಿ ಸ೦ಸದ ನಳಿನ್ ಕುಮಾರ್ ಕಟೀಲ್, ಶಾಸಕ ಆಶೋಕ್ ಕುಮಾರ್ ರೈ ಸೇರಿದಂತೆ ಗಣ್ಯರು ಹಾಜರಿದ್ದರು.


