23.6 C
Karnataka
Sunday, June 14, 2026

ಭಾಷಾ ಬೆಳವಣಿಗೆಗೆ ಅನುವಾದ ಸಾಹಿತ್ಯ ಮುಖ್ಯವಾದುದು : ಪ್ರೊ.ಎ.ವಿ.ನಾವಡ

ಮಂಗಳೂರು : ಭಾಷೆಯ ಬೆಳವಣಿಗೆಗೆ ಸಾಹಿತ್ಯ ಅನುವಾದ ತುಂಬಾ ಮುಖ್ಯವಾಗಿದ್ದು, ಇತರ ಭಾಷೆಯ ಸಾಹಿತ್ಯ ತುಳು ಭಾಷೆಗೆ ಬರುವಂತಹದ್ದು, ತುಳುವಿನ ಪಾಡ್ದನ ಸೇರಿದಂತೆ ತುಳು ಸಾಹಿತ್ಯ ಇತರ ಭಾಷೆಗಳಿಗೆ ಅನುವಾದಗೊಳ್ಳುವಂತಹ ಕೆಲಸಗಳು ನಡೆಯಬೇಕಾಗಿದೆ ಎಂದು ಹಿರಿಯ ವಿದ್ವಾಂಸ ಡಾ.ಎ. ವಿ.ನಾವಡ ಅವರು ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ತುಳು ಭವನದಲ್ಲಿ ಆಯೋಜಿಸಿದ ತುಳು ಭಾಷೆಗೆ ಅನುವಾದಿಸಲಾದ ಕನಕದಾಸರ ಸಮಗ್ರ ಸಾಹಿತ್ಯ ಕೃತಿಗಳ ಸಂವಾದ ಹಾಗೂ ಕಾವ್ಯ ವಾಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನಕದಾಸರ ಕಾವ್ಯ ಹಾಗೂ ಕೀರ್ತನೆಗಳು ತುಳು ಭಾಷೆಗೆ ಅನುವಾದಿಸಲ್ಪಟ್ಟಿರುವುದು ಅತ್ಯಂತ ಮಹತ್ವದ ಹಾಗೂ ಚಾರಿತ್ರಿಕ ಕಾರ್ಯವಾಗಿದೆ ಎಂದು ಎ.ವಿ.ನಾವಡ ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ಸರ್ಕಾರದ ಸಂತ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರವು ಅನುವಾದಿಸಿದ ಕನಕದಾಸರ ಕಾವ್ಯ ‘ಮೋಹನ ತರಂಗಿಣಿ’, ‘ಹರಿಭಕ್ತಿ ಸಾರ’, ‘ರಾಮಧಾನ್ಯ ಚರಿತೆ’, ‘ನಳಚರಿತ್ರೆ’ ಹಾಗೂ ‘ಕೀರ್ತನೆಗಳು’ ಗಳನ್ನು ಪ್ರೊ. ಎ.ವಿ.ನಾವಡ ಅವರ ಸಂಪಾದಕತ್ವದಲ್ಲಿ ವಿವಿಧ ಸಾಹಿತಿಗಳ ಪಾಲ್ಗೊಳ್ಳುವಿಕೆಯಲ್ಲಿ ತುಳುವಿಗೆ ಅನುವಾದಿಸಲಾಗಿದ್ದು, ಈ ಕೃತಿಗಳ ಬಗ್ಗೆ ಅವಲೋಕನ ನಡೆಸಲಾಯಿತು.
ಕೃತಿಗಳ ಅವಲೋಕನ ನಡೆಸಿದ ತುಳು ಕನ್ನಡ ವಿದ್ವಾಂಸ ಪ್ರೊ. ಶಿವರಾಮಶೆಟ್ಟಿ ಅವರು ಮಾತನಾಡಿ, ‘ಭಾಷಾಂತರವು ಕೇವಲ ಪದಗಳ ವರ್ಗಾವಣೆ ಅಲ್ಲ, ಒಂದು ಸಂಸ್ಕೃತಿ, ಚಿಂತನೆ ಮತ್ತು ಮೌಲ್ಯಗಳನ್ನು ಮತ್ತೊಂದು ಭಾಷೆಯ ಓದುಗರಿಗೆ ತಲುಪಿಸುವ ಸೇತುವೆಯಾಗಿದೆ. ‘ಕನಕದಾಸರ ಅಧ್ಯಯನವು ಕೇವಲ ಸಾಹಿತ್ಯಿಕ ದೃಷ್ಟಿಯಿಂದ ಮಾತ್ರವಲ್ಲ, ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿಯೂ ನಡೆಯಬೇಕು ಎಂದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ ಪ್ರಾಂಶುಪಾಲ ಪ್ರೊ.ಕೃಷ್ಣಮೂರ್ತಿ, ಉಪನ್ಯಾಸಕರಾದ ರಘು ಇಡ್ಕಿದು ಹಾಗೂ ಡಾ.ಸುಧಾರಾಣಿ ಕೃತಿಗಳ ಬಗ್ಗೆ ಪ್ರತಿಕ್ರಿಯೆ ನೀಡಿದರು.
ಕೃತಿ ಅನುವಾದಕರಾದ ಆತ್ರಾಡಿ ಅಮೃತ ಶೆಟ್ಟಿ, ಭಾಸ್ಕರ್ ರೈ ಕುಕ್ಕುವಳ್ಳಿ, ಪ್ರೊ.ಟಿ.ವಿ.ಎನ್. ಖಂಡಿಗೆ, ಮುದ್ದು ಮೂಡುಬೆಳ್ಳೆ, ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಡಾ. ವಸಂತ ಕುಮಾರ್ ಪೆರ್ಲ, ಅಕಾಡೆಮಿ ಸದಸ್ಯರಾದ ಕುಂಬ್ರ ದುರ್ಗಾಪ್ರಸಾದ್ ರೈ ಉಪಸ್ಥಿತರಿದ್ದರು. ಅಕಾಡೆಮಿಯ ‘ನಮ್ಮ ತುಳುವೆರ್’ ಮಾಲಿಕೆಯಲ್ಲಿ ಪ್ರಕಟಿಸಲಾದ ರಘು ಇಡ್ಕಿದು ಅವರು ರಚಿಸಿದ ‘ತುಳು ಕನ್ನಡೊದ ಮಾಮಲ್ಲ ಸಂಶೋಧಕೆರ್ ಪ್ರೊ.ಎ.ವಿ.ನಾವಡೆರ್’ ಕೃತಿಯನ್ನು ಪ್ರೊ. ಶಿವರಾಮ ಶೆಟ್ಟಿ ಅವರು ಬಿಡುಗಡೆ ಮಾಡಿದರು.
ನಾದಾ ಮಣಿನಾಲ್ಕೂರು ಅವರಿಂದ ಕನಕದಾಸರ ತುಳು ಕೀರ್ತನೆ, ಕಾವ್ಯಗಳ ಗಾಯನ ಕಾರ್ಯಕ್ರಮ ನಡೆಯಿತು.ಅಕಾಡೆಮಿ ಸದಸ್ಯರಾದ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿದರು.ಅಕಾಡೆಮಿ ಸದಸ್ಯೆ ಅಕ್ಷಯ ಆರ್.ಶೆಟ್ಟಿ ನಿರೂಪಿಸಿ ವಂದಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles