ಮ೦ಗಳೂರು: ಕರಾವಳಿ ಭಾಗದ ಜನರಿಗೆ ಶೀಘ್ರಗತಿಯಲ್ಲಿ ನ್ಯಾಯದಾನ ಒದಗಿಸಲು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಯಾಗಬೇಕು ಎಂಬ ಮಂಗಳೂರು ವಕೀಲರ ಸಂಘದ ಹಲವು ವರ್ಷಗಳ ಬೇಡಿಕೆಯು ಎಲ್ಲಾ ರೀತಿಯಿಂದಲೂ ನ್ಯಾಯಯುತವಾಗಿದೆ. ಅಂತೆಯೇ ಇಡೀ ಮಂಗಳೂರಿನ ಜನತೆಯ ಪರವಾಗಿ ನನ್ನ ಆಗ್ರಹವೂ ಅದೇ ಆಗಿದ್ದು, ಅದರಲ್ಲಿ ಯಾವುದೇ ರಾಜಿಯಿಲ್ಲ ಎ೦ದು ಶಾಸಕ ವೇದವ್ಯಾಸ ಕಾಮತ್ ಆಗ್ರಹಿಸಿದ್ದಾರೆ.
.
ಆರಂಭದಿಂದಲೂ ರಾಜಕೀಯ ರಹಿತವಾಗಿ ನಡೆದುಕೊಂಡು ಬಂದ ಈ ಹೋರಾಟದ ಪ್ರತೀ ಹೆಜ್ಜೆಯಲ್ಲೂ ವಕೀಲರ ಸಂಘದ ಜೊತೆ ನಿಂತು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ, ಕಾನೂನು ಸಚಿವರಾದ ಎಚ್.ಕೆ. ಪಾಟೀಲ್ ರವರಿಗೆ ಜಿಲ್ಲೆಯ ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳು ಹಾಗೂ ಪ್ರಮುಖರ ಉಪಸ್ಥಿತಿಯಲ್ಲಿ ಮನವಿ ಸಲ್ಲಿಸಿದ್ದು ಮಾತ್ರವಲ್ಲದೇ, ವೈಯಕ್ತಿಕವಾಗಿ ಹಾಗೂ ಅಧಿವೇಶನದಲ್ಲೂ ಸರ್ಕಾರವನ್ನು ಹಲವು ಬಾರಿ ಆಗ್ರಹಿಸಿದ್ದೇನೆ ಎ೦ದವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಈ ನಡುವೆ ಮುಖ್ಯಮಂತ್ರಿಗಳು ನಮ್ಮೆಲ್ಲರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿರುವುದು ಸ್ವಾಗತಾರ್ಹವಾಗಿದ್ದು, ಇಂತಹ ಸಂದರ್ಭದಲ್ಲಿ, ಒಂದಷ್ಟು ಜನರು ಮಂಗಳೂರಿನ ಬದಲು, ಬೇರೆ ಜಿಲ್ಲೆಯಲ್ಲಿ ಸಂಚಾರಿ ಪೀಠವನ್ನು ಆರಂಭಿಸಿ ಎಂದು ಆಗ್ರಹಿಸುತ್ತಿರುವುದು ಸರಿಯಲ್ಲ, ಮತ್ತು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ., ಮಂಗಳೂರಿನಲ್ಲಿಯೇ ಹೈಕೋರ್ಟ್ ಪೀಠ ಸ್ಥಾಪನೆ ಆಗಬೇಕು ಎಂಬುದು ನಮ್ಮ ದೃಢ ನಿಲುವಾಗಿದ್ದು, ಇನ್ನು ಮುಂದಕ್ಕೂ ಆ ನಿಟ್ಟಿನಲ್ಲಿ ಎಂದಿನಂತೆ ಸಂಪೂರ್ಣ ಸಹಕಾರ ನೀಡುತ್ತೇನೆ ಎ೦ದರು.
ಮಳೆಗಾಲಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿದ್ದು, ಪಾಲಿಕೆ ವ್ಯಾಪ್ತಿಯ ರಾಜಕಾಲುವೆಗಳಲ್ಲಿ ಹಾಗೂ ಚರಂಡಿಗಳಲ್ಲಿ ಹೂಳೆತ್ತುವುದು, ಪ್ರತೀ ವಾರ್ಡ್ ಗಳಿಗೆ ಗ್ಯಾಂಗ್ ಮೆನ್ ನೇಮಿಸುವುದು, ಸೇರಿದಂತೆ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವಂತೆ ಅನೇಕ ಬಾರಿ ಸೂಚಿಸಿದ ಹೊರತಾಗಿಯೂ ಪಾಲಿಕೆಯ ಆಡಳಿತ ಆ ಬಗ್ಗೆ ನಿರೀಕ್ಷಿತ ಮಟ್ಟದಲ್ಲಿ ಕಾರ್ಯನಿರ್ವಹಿಸದಿರುವುದು ಖಂಡನೀಯ ಎ೦ದವರು ಹೇಳಿದರು..
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖ೦ಡರಾದ ರಮೇಶ್ ಕಂಡೆಟ್ಟು, ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್, ಪ್ರೇಮಾನಂದ ಶೆಟ್ಟಿ, ಪೂರ್ಣಿಮಾ ಎಂ. ರವಿಶಂಕರ್ ಮಿಜಾರ್, ಮೋಹನ್ ಪೂಜಾರಿ, ಪ್ರವೀಣ್ ನಿಡ್ಡೆಲ್,, ಸುರೇಖಾ ಎಂ.ಎಸ್, ನಿತಿನ್ ಕುಮಾರ್ ಉಪಸ್ಥಿತರಿದ್ದರು


