ಮಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಅತ್ತಿಗುಂಡಿ ಗ್ರಾಮದಿಂದ ಮಲಗಾರು ಗ್ರಾಮಕ್ಕೆ ಹೋಗುವ ಕಚ್ಚಾ ರಸ್ತೆಯಲ್ಲಿ ಮೇ 19 ರಂದು ಕಾಡು ಪ್ರಾಣಿಗಳ ಬೇಟೆಯಾಡುತ್ತಿದ್ದ ಚಿಕ್ಕಮಗಳೂರು ಜಿಲ್ಲೆಯ ವೆಂಕಟರಮಣ ಬಿನ್ ಲೇ/ ಪೊನ್ನು ಸ್ವಾಮಿ (35), ತಮಿಳುನಾಡಿನ ಕನ್ನಿಯಪ್ಪನ್ ಬಿನ್ ಲೇ/ ಗೋವಿಂದ ರಾಜು (25), ಸುರೇಶ ಬಿನ್ ಚಿನ್ನರಾಜು (20) ಎಂಬ ಮೂವರನ್ನು ಬಂಧಿಸಲಾಗಿದೆ.
ಚಿಕ್ಕಮಗಳೂರು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸರು ಪಂಚರ ಸಮಕ್ಷಮ ಸಿಬ್ಬಂದಿಗಳೊಂದಿಗೆ ದಾಳಿ ಮಾಡಿದಾಗ ಆರೋಪಿಗಳಿಂದ ಜಿಂಕೆ ಜಾತಿಗೆ ಸೇರಿದ ಪ್ರಾಣಿಯ ಕಳೆಬರಹ, ಬಿಳಿ ಬಣ್ಣದ 1 ಬಟ್ಟೆ ಬ್ಯಾಗ್, 2 ಹೆಡ್ ಲೈಟ್‍ಗಳು, 2 ಕಾಡು ಜಾತಿಯ ಮರದ ದೊಣ್ಣೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಉಪ ಮಹಾನಿರೀಕ್ಷಕಿ ಸಂಗೀತಾ. ಜಿ, ಸಿ.ಐ.ಡಿ. ಅರಣ್ಯ ಘಟಕ, ಬೆಂಗಳೂರು, ಮತ್ತು ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಪವನ್ ನೆಜ್ಜೂರು ಐಪಿಎಸ್ ರವರ ಮಾರ್ಗದರ್ಶನದಲ್ಲಿ ಚಿಕ್ಕಮಗಳೂರು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಉಪನಿರೀಕ್ಷಕ ಬಾಬುದ್ದೀನ್ ಹಾಗೂ ಸಿಬ್ಬಂದಿಗಳಾದ ದೇವರಾಜ, ಕೃಷ್ಣರಾಜ್ ಅರಸ್, ದಿಲೀಪ್, ನಟರಾಜ್, ಹಾಲೇಶ್, ಹೇಮಾವತಿ, ಚಾಲಕರಾದ ತಿಮ್ಮಶೆಟ್ಟಿ ಪಾಲ್ಗೊಂಡಿರುತ್ತಾರೆ.
ಅರಣ್ಯ ಕಾಯ್ದೆ ಮತು ವನ್ಯಜೀವಿಗಳ ಸಂರಕ್ಷಣಾ ಕಾಯ್ದೆ ಸಂಬಂಧಪಟ್ಟ ಅಕ್ರಮ ಚಟುವಟಿಕೆಗಳು ಕಂಡುಬಂದಲ್ಲಿ ಮಡಿಕೇರಿ ಸಿಐಡಿ ಅರಣ್ಯ ಘಟಕ ಪೊಲೀಸ್ ಅಧೀಕ್ಷಕರ ಕಛೇರಿ ದೂ.ಸಂ: 9480800220 ಅಥವಾ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ಮಂಗಳೂರು ಕಛೇರಿ ದೂ.ಸಂ; 8277949810 ಗೆ ಮಾಹಿತಿ ನೀಡಬಹುದು ಎಂದು ಮಂಗಳೂರು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಉಪನಿರೀಕ್ಷಕರ ಪ್ರಕಟಣೆ ತಿಳಿಸಿದೆ.


