ಮಂಗಳೂರು: ಯುವ ಜನರು ಸೇರಿದಂತೆ ಸಮಾನ ಮನಸ್ಕರ ಒಗ್ಗಟ್ಟು, ಧರ್ಮದ ಚಿಂತನೆ, ಸ್ವಾರ್ಥ ರಹಿತ ಕೆಲಸಕ್ಕೆ ಭಗವಂತನ ಆಶೀರ್ವಾದ ಸದಾ ಇರುತ್ತದೆ ಎನ್ನುವುದಕ್ಕೆ ಮಂಗಳೂರು ಕಂಬಳವೇ ಸಾಕ್ಷಿ ಎಂದು ಮಂಗಳೂರು ಕಂಬಳ ಸಮಿತಿ ಅಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.
ಡಿ.27ರಂದು ನಡೆಯಲಿರುವ ಮಂಗಳೂರು ಕಂಬಳದ ಕುರಿತಂತೆ ನಗರದ ಪತ್ತುಮುಡಿ ಸೌಧದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಾಮಾನ್ಯ ಯುವಕರೆಲ್ಲ ಸೇರಿಕೊಂಡು ಆರಂಭಿಸಿದ್ದ ಮಂಗಳೂರು ಕಂಬಳಕ್ಕೆ ಈ ಬಾರಿ 9ನೇ ವರ್ಷದ ಸಂಭ್ರಮವಾಗಿರುವುದು ಅತ್ಯಂತ ಖುಷಿಯ ವಿಚಾರ. ಈ ನಿಟ್ಟಿನಲ್ಲಿ ಒಂಬತ್ತು ರೀತಿಯ ವಿಭಿನ್ನ ಕಾರ್ಯಕ್ರಮ ಆಯೋಜಿಸುವ ಯೋಚನೆ ಇಟ್ಟುಕೊಂಡಿದ್ದೇವೆ ಎಂದು ಕ್ಯಾ. ಚೌಟ ತಿಳಿಸಿದ್ದಾರೆ.
ಮಾಜಿ ಸಚಿವ ನಾಗರಾಜ ಶೆಟ್ಟಿ ಮಾತನಾಡಿ, ಸಂಸದರಾಗಿ ಹಾಗೂ ಕಂಬಳದ ರುವಾರಿಯಾಗಿ ಕ್ಯಾ. ಬ್ರಿಜೇಶ್ ಚೌಟ ಅವರು ದಕ್ಷಿಣ ಕನ್ನಡ ಅಭಿವೃದ್ಧಿ ಜತೆಗೆ ತುಳುನಾಡಿನ ನಮ್ಮ ಜನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿರುವುದು ಶ್ಲಾಘನೀಯ. ಪ್ರಧಾನಿ ಮೋದಿ ಸೇರಿದಂತೆ ದೆಹಲಿಯಲ್ಲಿರುವ ಹಲವು ಗಣ್ಯರಿಗೆ ಕ್ಯಾ. ಚೌಟ ಅವರು ನಮ್ಮ ಕಂಬಳದ ಬಗೆಗಿನ ಸ್ಮರಣಿಕೆಯನ್ನು ನೀಡುವ ಮೂಲಕ ಈ ಜಾನಪದ ಕ್ರೀಡೆಯ ಅರಿವನ್ನು ರಾಷ್ಟ್ರರಾಜಧಾನಿಯಲ್ಲಿಯೂ ಮೂಡಿಸುತ್ತಿದ್ದಾರೆ. ಮುಂದೆ ಇದು ವಿಶ್ವಮಟ್ಟದಲ್ಲಿಯೂ ಹರಡುವ ಕೆಲಸವು ಕ್ಯಾ. ಚೌಟ ಅವರಿಂದ ಆಗಲಿ ಎಂದು ಅವರು ಹಾರೈಸಿದ್ದಾರೆ.
ಕಂಬಳ ಸಮಿತಿಯ ಉಪಾಧ್ಯಕ್ಷ ಅನಿಲ್ ಕುಮಾರ್ ಮಾತನಾಡಿ, ಕುಳೂರಿನಲ್ಲಿ ಕಂಬಳ ನಡೆಸಿಕೊಂಡು ಬಂದಿದ್ದು ಆ ಭಾಗದಲ್ಲಿ ಹಬ್ಬದ ಕಳೆ ಪಡೆದಿದೆ. ಕಂಬಳದಿಂದಾಗಿ ಕುಳೂರಿನಲ್ಲಿ ವ್ಯಾಪಾರ- ಸಮೃದ್ಧಿಯಾಗಿ ಸ್ಥಳೀಯವಾಗಿ ಅಭಿವೃದ್ಧಿಗೂ ಕಾರಣವಾಗಿದೆ. ಇದರಿಂದ ಈ ಪ್ರದೇಶದಲ್ಲಿ ಬೇರೆ-ಬೇರೆ ಕಾರ್ಯಕ್ರಮಗಳಿಗೂ ನಾಂದಿ ಹಾಡಿದೆ. ಈ ಭಾಗದ ಪ್ರತಿನಿಧಿಯಾಗಿ ಮಂಗಳೂರು ಕಂಬಳಕ್ಕೆ ಸದಾ ನನ್ನ ಬೆಂಬಲವಿರುತ್ತದೆ ಎಂದು ಹೇಳಿದರು.
ಮಂಗಳೂರು ಕಂಬಳ ಸಮಿತಿಯ ಗೌರವ ಸಲಹೆಗಾರರಾದ ಪ್ರಸಾದ್ ಕುಮಾರ್ ಶೆಟ್ಟಿ, ಕುಳೂರು ಪೊಯ್ಯೆಲು ಪಿ.ಆರ್ ಶೆಟ್ಟಿ, ಕಂಬಳ ಸಮಿತಿಯ ಉಪಾಧ್ಯಕ್ಷರು ಹಾಗೂ ಮಾಜಿ ಮನಪಾ ಸದಸ್ಯರಾದ ಕದ್ರಿ ಮನೋಹರ್ ಶೆಟ್ಟಿ, ಭರತ್ ಸೂಟರ್ ಪೇಟೆ, ಸಂದೀಪ್ ಗರೋಡಿ, ಸಂಜಯ ಪ್ರಭು, ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಜಿತ್ ಪ್ರತಾಪ್ ಮಂಗಲ್ಪಾಡಿ ಉಪಸ್ಥಿತರಿದ್ದರು. ಈಶ್ವರ್ ಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಮನ್ಮಥ್ ಶೆಟ್ಟಿ ಪುತ್ತೂರು ನಿರೂಪಿಸಿ, ಕಂಬಳ ಸಮಿತಿ ಸಂಚಾಲಕ ಸಚಿನ್ ಶೆಟ್ಟಿ ಸಾಂತ್ಯ ವಂದಿಸಿದರು.


