ಮಂಗಳೂರು: ದಕ್ಷಿಣ ಕನ್ನಡದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಪರಿಕಲ್ಪನೆಯಡಿ, ಮುಂದಿನ 5 ವರ್ಷದಲ್ಲಿ ಮಂಗಳೂರನ್ನು ದೇಶದ ಪ್ರಮುಖ ಉದ್ದಿಮೆ ಕೇಂದ್ರವನ್ನಾಗಿ ಪರಿವರ್ತಿಸುವ ಗುರಿಯೊಂದಿಗೆ ಹಮ್ಮಿಕೊಂಡಿರುವ ‘ಬೊಲ್ಪು – ಅವಕಾಶ ನವೋದಯʼ ಯೋಜನೆಯು ಇದೀಗ ಮಹತ್ವದ ಘಟ್ಟ ತಲುಪಿದೆ.
ನವೋದ್ಯಮ ಸಂಸ್ಥಾಪಕರಿಗೆ ದಿಕ್ಸೂಚಿಯಾಗುವ ಮತ್ತು ಮಾರ್ಗದರ್ಶಕರನ್ನು ಒದಗಿಸುವ ಈ ಯೋಜನೆಗೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ಅಂತಿಮ ದಿನಾಂಕದವರೆಗೆ ಒಟ್ಟು 850ಕ್ಕೂ ಹೆಚ್ಚು ಸ್ಟಾರ್ಟ್‌ಅಪ್ ಐಡಿಯಾಗಳ ಕುರಿತು ಅರ್ಜಿ ಸಲ್ಲಿಕೆಯಾಗಿದ್ದವು. ಇವುಗಳಲ್ಲಿ ಮೂರು ಹಂತಗಳ ಕಠಿಣ ಆಯ್ಕೆ ಪ್ರಕ್ರಿಯೆಯ ನಂತರ ಅಂತಿಮವಾಗಿ ಒಟ್ಟು 11 ವಿಭಿನ್ನ ಹಾಗೂ ನವೀನ ಆಲೋಚನೆಗಳನ್ನು ಆಯ್ಕೆ ಮಾಡಲಾಗಿದೆ. ಅದರಂತೆ ಈ ಭಾವಿ ನವೋದ್ಯಮಿಗಳ ಜತೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಇಂದು ಯೆಯ್ಯಾಡಿಯ ಖಾಸಗಿ ಹೊಟೇಲ್ ನಲ್ಲಿ ಸಂವಾದ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಕ್ಯಾ.ಚೌಟ ಅವರು, ದಕ್ಷಿಣ ಕನ್ನಡದ ಸಾಮರ್ಥ್ಯಕ್ಕೆ ತಕ್ಕಂತೆ ಮುಂದಿನ 5 ವರ್ಷಗಳಲ್ಲಿ ಕನಿಷ್ಠ 50 ಯಶಸ್ವಿ ಉದ್ಯಮಶೀಲತೆಯ ಕಥೆಗಳನ್ನು ಸೃಷ್ಟಿಸುವುದು ಈ ಬೊಲ್ಪು ಯೋಜನೆಯ ಮುಖ್ಯ ಗುರಿ. ವಿಶೇಷವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಲ್ಪನೆಯ ‘ಸ್ಟಾರ್ಟ್-ಅಪ್ ಇಂಡಿಯಾ’ದ 11ನೇ ವರ್ಷದಲ್ಲಿ ನಾವಿರುವಾಗ 11 ವಿಭಿನ್ನ ಐಡಿಯಾಗಳು ಬೊಲ್ಪು ಯೋಜನೆಗೆ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ. ಹೀಗಿರುವಾಗ ನವೋದ್ಯಮಿಗಳು ಯಾವುದೇ ಅಡೆ-ತಡೆ ಅಥವಾ ಸವಾಲುಗಳ ಬಗ್ಗೆ ಯೋಚಿಸದೆ ಸಾಧ್ಯತೆಗಳತ್ತ ಗಮನಹರಿಸಿದಾಗ ಮಾತ್ರ ಬೆಳವಣಿಗೆ ಸಾಧ್ಯ. ಯಾಕೆಂದರೆ ಯಶಸ್ಸು ಅಥವಾ ವೈಫಲ್ಯವು ವ್ಯಕ್ತಿಯ ಮನಸ್ಥಿತಿಯನ್ನು ಅವಲಂಬಿಸಿರುತ್ತದೆ ಎಂದು ನವೋದ್ಯಮ ಸ್ಥಾಪನೆಗೆ ಮುಂದಾಗಿರುವವರಿಗೆ ಸೂಕ್ತ ಉತ್ತೇಜನ ನೀಡಿದ್ದಾರೆ.
ಮಂಗಳೂರನ್ನು ಮುಂದಿನ ದೊಡ್ಡ ಸ್ಟಾರ್ಟ್-ಅಪ್ ಹಬ್ ಆಗಿ ರೂಪಿಸುವ ಗುರಿಯೊಂದಿಗೆ, ಈ ಯೋಜನೆಯಲ್ಲಿ 50% ಮಹಿಳಾ ಉದ್ಯಮಿಗಳಿರಬೇಕೆಂಬ ಆಶಯ ವ್ಯಕ್ತಪಡಿಸಿದ ಅವರು ‘ಬೊಲ್ಪು’ ಮೆಂಟರ್‌ಗಳಿಗೆ ಇದೇವೇಳೆ ಕೃತಜ್ಞತೆ ಸಲ್ಲಿಸಿದ್ದಾರೆ.


