ಮ೦ಗಳೂರು: ಹೈದರಾಬಾದಿನಲ್ಲಿ ಕುಳಿತು ಸೈಬರ್ ವಂಚನ ಜಾಲದಲ್ಲಿ ಕಾರ್ಯಾಚರಿಸುತ್ತಿದ್ದ ಸೈಬರ್ ವಂಚಕರನ್ನು ಮಂಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳ ತಂಡವು ಬ೦ಧಿಸಿದೆ.
ಆಂಧ್ರ ಪ್ರದೇಶದ ನೆಲ್ಲೂರುನ ಶೇಖ್ ಕರೀಮುಲ್ಲಾ @ ರಸೂಲ್ (27), ಕರ್ನೂಲ್ ನ ಬುಡಿದಿನ್ನೆ ವಂಶಿ @ ಗುರು (21),ತೆಲಂಗಾಣದ ಪಂಡಿತಿ ಕ್ರಾಂತಿ ಕುಮಾರ್ (36),ಬಡೆ ಶ್ರೀನಿವಾಸ್ (38), ಮಂಗಳೂರು ಮುಲ್ಕಿಯ ಇಬ್ರಾಹಿಂ (35),ನೆಲ್ಲೂರುನ ಉತ್ಪಲ ಸಂತೋಷ್ ಕೃಷ್ಣ (35) ಬ೦ಧಿತ ಆರೋಪಿಗಳು.ಆರೋಪಿತರಿಂದ 18 ಮೊಬೈಲ್ ಫೋನ್, 1 ಲ್ಯಾಪ್ ಟಾಪ್ ,2 ಸಿಮ್ ಕಾರ್ಡ್ 1,15 ಚೆಕ್ ಬುಕ್ ಹಾಗೂ 18 ಡೆಬಿಟ್ ಕಾರ್ಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿತರಿಂದ ಸ್ವಾಧೀನಪಡಿಸಿದ ಮೊಬೈಲ್ ಫೋನ್ ಹಾಗೂ ಲ್ಯಾಪ್ ಟಾಪ್ ಗಳನ್ನು ಪರಿಶೀಲನೆ ನಡೆಸಿದಾಗ, ಒಟ್ಟು 72 ಖಾತೆಗಳ ವಿವರಗಳು ಕಂಡುಬಂದಿದ್ದು, ಅದರಲ್ಲಿ 30 ಬ್ಯಾಂಕ್ ಖಾತೆಗಳ ಮೇಲೆ NCRP Portal ನಲ್ಲಿ ಒಟ್ಟು 272 ಕ್ಕೂ ಹೆಚ್ಚು ದೂರುಗಳು ದಾಖಲಾಗಿರುವುದು ಕಂಡುಬಂದಿರುತ್ತದೆ. ಸದ್ರಿ ಸೈಬರ್ ವಂಚನಾ ತಂಡವು 26-02-2026 ರಂದು ಒಂದೇ ದಿನ 2 ಕೋಟಿಗೂ ಹೆಚ್ಚಿನ ಹಣಕಾಸಿನ ವಹಿವಾಟು ನಡೆಸಿರುವುದು ತನಿಖೆ ಸಮಯ ಕಂಡುಬಂದಿದ್ದು, ಸೈಬರ್ ವಂಚಕರು ವಂಚನೆಗೆ ಬಳಕೆ ಮಾಡಿರುವ ಬ್ಯಾಂಕ್ ಖಾತೆಗಳ ಮೇಲೆ ದಾಖಲಾಗಿರುವ ಪ್ರಕರಣಗಳು ಹಾಗೂ ಹಣಕಾಸು ವಹಿವಾಟಿನ ಬಗ್ಗೆ ಹೆಚ್ಚಿನ ಪರಿಶೀಲನೆ ನಡೆಸಲಾಗುತ್ತಿದೆ.
ಸಾರಾಂಶ:
ಈ ಪ್ರಕರಣದ ದೂರುದಾರ, ಮಂಗಳೂರು ನಗರದ ಬಂದರು ನಿವಾಸಿ ಮೊಹಮ್ಮದ್ ಇಕ್ಬಾಲ್ ರವರ ಸ್ನೇಹಿತ ಇಬ್ರಾಹಿಂ ಎಂಬಾತನು ದೂರುದಾರರ ಕರೆಂಟ್ ಖಾತೆಯನ್ನು ವ್ಯವಹಾರದ ಉದ್ದೇಶಕ್ಕಾಗಿ ನೀಡುವಂತೆ ಕೇಳಿಕೊಂಡಿದ್ದು, ದೂರುದಾರರು ಅದಕ್ಕೆ ಒಪ್ಪಿ ತಮ್ಮ ಬ್ಯಾಂಕ್ ಖಾತೆಯ ಪಾಸ್ ಬುಕ್, ಎ.ಟಿ.ಎಂ ಕಾರ್ಡ್, ಚೆಕ್ ಬುಕ್ ಹಾಗೂ ಖಾತೆಗೆ ಲಿಂಕ್ ಆಗಿದ್ದ ಏರ್ ಟೆಲ್ ಕಂಪನಿಯ ಸಿಮ್ ಕಾರ್ಡನ್ನು ಇಬ್ರಾಹಿಂಗೆ ನೀಡಿದ್ದರು. ಸದ್ರಿ ಖಾತೆಯನ್ನು ಸೈಬರ್ ವಂಚಕರು ದುರುಪಯೋಗಪಡಿಸಿಕೊಂಡ ಬಗ್ಗೆ ಮಂಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದಲ್ಲಿ ತನಿಖೆ ಕೈಗೊಂಡು, ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿ ಪರಿಶೀಲನೆ ನಡೆಸಿದಾಗ, ಸದ್ರಿ ಬ್ಯಾಂಕ್ ಖಾತೆ ದುರುಪಯೋಗಪಡಿಸಿಕೊಂಡ ಸೈಬರ್ ವಂಚನಾ ತಂಡವು ಹೈದರಾಬಾದಿನಲ್ಲಿ ಕಾರ್ಯಾಚರಿಸುತ್ತಿರುವುದು ಕಂಡುಬಂದಿದೆ. ಮಂಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳ ತಂಡವು ಹೈದರಾಬಾದ್ ಗೆ ತೆರಳಿ ಸೈಬರ್ ವಂಚನಾ ತಂಡವನ್ನು ಪತ್ತೆ ಮಾಡಿ, 5 ಜನ ಆರೋಪಿಗಳನ್ನು ಹೈದರಾಬಾದ್ ನಲ್ಲಿ ಹಾಗೂ ಒರ್ವ ಆರೋಪಿತನನ್ನು ಮಂಗಳೂರಿನಲ್ಲಿ ದಸ್ತಗಿರಿ ಮಾಡಲಾಗಿದೆ.
ಆರೋಪಿಗಳು ಸಾಮಾಜಿಕ ಮಾಧ್ಯಮಗಳ ಮುಖಾಂತರ ಬ್ಯಾಂಕ್ ಖಾತೆದಾರರಿಗೆ ಶೇಕಡ 4 ರಿಂದ 6 ರಷ್ಟು ಕಮೀಷನ್ ನೀಡುವುದಾಗಿ ಅಕರ್ಷಕ ಜಾಹೀರಾತುಗಳನ್ನು ನೀಡಿ, ಇದರಿಂದ ದುರಾಸೆಗೊಳಗಾದ ವ್ಯಕ್ತಿಗಳಿಂದ ಬ್ಯಾಂಕ್ ಖಾತೆಗಳ ಸಂಪೂರ್ಣ ವಿವರಗಳನ್ನು ಮತ್ತು ಓಟಿಪಿಯನ್ನು ಪಡೆದುಕೊಂಡು ವಿದೇಶದಲ್ಲಿರುವ ಸೈಬರ್ ವಂಚಕರಿಗೆ ರವಾನಿಸಿ, ವಂಚನೆ ನಡೆಸುತ್ತಿರುವುದು ತನಿಖೆಯ ವೇಳೆ ತಿಳಿದುಬಂದಿರುತ್ತದೆ.
,


