ಮಂಗಳೂರು: ನಗರದ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ದೇರಳಕಟ್ಟೆ ಪರಿಸರದ ಮುತ್ತೂಟ್ ಪೈನಾನ್ಸ್ ಬ್ಯಾಂಕ್ ಕಳ್ಳತನಕ್ಕೆ ಪ್ರಯತ್ನ ನಡೆಸಿದ ಪ್ರಕರಣದಲ್ಲಿ ದಸ್ತಗಿರಿಯಾಗದೇ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ. ಅಬ್ದುಲ್ ಲತೀಫ್ @ ಲತೀಫ್ ( 47 ವರ್ಷ) ಬ೦ಧಿತ ಆರೋಪಿ.

ಪ್ರಕರಣದ ವಿವರ
29-03-2025 ರಂದು ರಾತ್ರಿ ದೇರಳಕಟ್ಟೆ ಪರಿಸರದಲ್ಲಿರುವ ಹೆಚ್.ಎಮ್ ಕಾಂಪ್ಲೇಕ್ಸ್ ನ ಮುತ್ತೂಟ್ ಪೈನಾನ್ಸ್ ಕಚೇರಿಯ ಮುಂದಿನ ಬಾಗಿಲಿನ ಸೈರನ್ ಹೂಟರ್ ನ ಕೇಬಲ್ ಅನ್ನು ತುಂಡು ಮಾಡಿ ಪೈನಾನ್ಸ್ ಕಂಪನಿಯಲ್ಲಿ ಕಳವು ಮಾಡಲು ಪ್ರಯತ್ನ ಮಾಡಿರುವ ಪ್ರಕರಣದಲ್ಲಿ ಈಗಾಗಲೇ ಕೇರಳ ಇಡುಕ್ಕಿ ಮೂಲದ ಮುರಳಿ ಮತ್ತು ಕಾಂಞಿಗಾಡ್ ನ ಆರ್ಷದ್ ಎಂಬವರು ದಸ್ತಗಿರಿಯಾಗಿರುತ್ತಾರೆ. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಹಾಗೂ ಈ ಹಿಂದೆ ನಡೆದ ರಾಜಧಾನಿ ಜುವೆಲ್ಲರಿ ಶಾಪ್ ಕಳ್ಳತನ ಹಾಗೂ ಕೇರಳ ರಾಜ್ಯದ ವಿಜಯ ಬ್ಯಾಂಕ್ ಕಳ್ಳತನದ ಮುಖ್ಯ ಸಂಚುಕೋರನಾದ ಕಾಸರಗೋಡು ವೆಲ್ಲರಿಕುಂಡು ನಿವಾಸಿ , ಅಬ್ದುಲ್ ಲತೀಫ್ @ ಲತೀಫ್ ಎಂಬಾತನನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮದ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿರುತ್ತದೆ.
ಅಬ್ದುಲ್ ಲತೀಫ್ @ ಲತೀಫ್ ಮೇಲೆ ಈ ಹಿಂದೆ ಕೇರಳ ರಾಜ್ಯದ ಹೊಸದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯ ರಾಜಧಾನಿ ಜುವೆಲ್ಲರಿ ಶಾಪ್ ನ ಸುಮಾರು 20 ಕೆಜಿಯಷ್ಟು ಬಂಗಾರವನ್ನು ಕಳ್ಳತನ ಮಾಡಿದ ಪ್ರಕರಣ ಮತ್ತು ಕೇರಳ ರಾಜ್ಯದ ಚಂದೇರ್ ಪೊಲೀಸ್ ಠಾಣಾ ವ್ಯಾಪ್ತಿಯ ಚೆರವತ್ತೂರು ವಿಜಯ ಬ್ಯಾಂಕ್ ನ ಸುಮಾರು 15.80 ಕೆಜಿಯಷ್ಟು ಬಂಗಾರ ಮತ್ತು 2.5 ಲಕ್ಷ ರೂ. ಹಣವನ್ನು ಕಳ್ಳತನ ಮಾಡಿದ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿರುತ್ತಾನೆ .ಈ ಕಾರ್ಯಾಚರಣೆಯಲ್ಲಿ ಸಿಸಿಬಿ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿರುತ್ತಾರೆ


