33.8 C
Karnataka
Friday, May 1, 2026

ಕೈ ಮಗ್ಗ ಉತ್ಪನ್ನಗಳನ್ನು ಪ್ರೋತ್ಸಾಹಿಸಲು ಕರೆ

ಮಂಗಳೂರು: ತುಳುನಾಡಿನ ಪಾರಂಪರಿಕ ಕೈ ಮಗ್ಗ ವೃತ್ತಿಗೆ ತುಳುನಾಡಿನ ಜನತೆ ಎಲ್ಲಾ ರೀತಿಯ ಸಹಕಾರ ಬೆಂಬಲ ಕೊಡಬೇಕು ಎಂದು ಎ.ಬಿ.ಶೆಟ್ಟಿ ದಂತ ವೈದ್ಯಕೀಯ ಕಾಲೇಜಿನ ಅಸೋಸಿಯೇಟ್ ಡೀನ್ ಡಾ. ಅಮರಶ್ರೀ ಅಮರನಾಥ ಶೆಟ್ಟಿ ಅವರು ಹೇಳಿದರು.
ಅವರು ಶನಿವಾರ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಕಿನ್ನಿಗೋಳಿ ನೇಕಾರ ಸೌಧದಲ್ಲಿ ಕದಿಕೆ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ ಕೈ ಮಗ್ಗದ ನೇಯ್ಗೆಯ ಹಿರಿಯ ಕುಶಲಕರ್ಮಿ ದೇವಕಿ ಶೆಟ್ಟಿಗಾರ್ ಅವರಿಗೆ ‘ಚಾವಡಿ ತಮ್ಮನ’ ಗೌರವ ಸಮರ್ಪಿಸಿ ಮಾತನಾಡಿದರು.
ರಾಜ್ಯದ ಹಾಗೂ ದೇಶದ ಬೇರೆ ಬೇರೆ ಭಾಗಗಳಲ್ಲಿ ಸಾಂಪ್ರಾದಾಯಿಕ ರೀತಿಯಲ್ಲಿ ಬೆಳೆದು ಬಂದ ನೇಯ್ಗೆ ವೃತ್ತಿಯ ಬಗ್ಗೆ ನಾವೆಲ್ಲ ಅಭಿಮಾನಪಟ್ಟುಕೊಳ್ಳುತ್ತೇವೆ. ಇದೇ ಸಂದರ್ಭದಲ್ಲಿ ನಮ್ಮದೇ ನೆಲದಲ್ಲಿ ಹುಟ್ಟಿ ಬೆಳೆದ ಒಂದು ಕಾಲದಲ್ಲಿ ಕುಲ ಕಸುಬಾಗಿದ್ದ ಕೈ ಮಗ್ಗ ನೇಯ್ಗೆಯವರಿಗೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ವರ್ಷದಲ್ಲಿ ಒಂದು ಬಾರಿಯಾದರೂ ತುಳುನಾಡಿನ ಸೀರೆ ಹಾಗೂ ಕೈ ಮಗ್ಗದ ಉತ್ಪನ್ನಗಳನ್ನು ಖರೀದಿಸಬೇಕೆಂದು ಅವರು ಆಶಯ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿರಿಯ ಕೈ ಮಗ್ಗ ನೇಯ್ಗೆಯ ಕುಶಲಕರ್ಮಿ ದೇವಕಿ ಶೆಟ್ಟಿಗಾರ್ ಅವರು, ತಾಳಿಪಾಡಿ ನೇಕಾರರ ಸೇವಾ ಸಂಘ ಹಾಗೂ ಕದಿಕೆ ಟ್ರಸ್ಟ್ ಅವರ ಕಾರಣದಿಂದಾಗಿ ನಾನು ಮತ್ತೇ ನನ್ನ ಮೂಲ ವೃತ್ತಿಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು. ನನಗೆ ಸಿಕ್ಕಿದ ಗೌರವವು ಈ ಎರಡೂ ಸಂಸ್ಥೆಗಳಿಗೆ ಅರ್ಪಿಸುತ್ತೇನೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಮಾತನಾಡಿ, ತುಳು ಬದುಕಿನ ವಿಶಾಲವಾದ ವ್ಯಾಪ್ತಿಯೊಳಗಡೆ ಅನೇಕ ಕುಲಕಸುಬು ಹಾಗೂ ಕುಶಲಕರ್ಮಿಗಳ ಸೇವೆ ತುಳುನಾಡಿಗೆ ಸಂದಿವೆ. ಈ ಹಿನ್ನಲೆಯಲ್ಲಿ ಕೈ ಮಗ್ಗ ನೇಯ್ಗೆಯಲ್ಲಿ ತೊಡಗಿಸಿಕೊಂಡ ಹಿರಿಯರನ್ನು ಪ್ರೋತ್ಸಾಹಿಸುವ ಸಲುವಾಗಿ ಅಕಾಡೆಮಿ ವತಿಯಿಂದ ಚಾವಡಿ ತಮ್ಮನದ ಗೌರವ ನೀಡಲಾಯಿತು ಎಂದರು.
ಸಮಾರಂಭದಲ್ಲಿ ಅಭಿನಂದನಾ ಭಾಷಣ ಮಾಡಿದ ಕದಿಕೆ ಟ್ರಸ್ಟ್‍ನ ಅಧ್ಯಕ್ಷೆ ಮಮತಾ ರೈ ಮಾತನಾಡಿ, 2018 ರಲ್ಲಿ ಕದಿಕೆ ಟ್ರಸ್ಟ್ ವತಿಯಿಂದ ಪಾರಂಪರಿಕ ಕೈ ಮಗ್ಗವನ್ನು ಪುನರುಜ್ಜೀವನಗೊಳಿಸುವ ಕೆಲಸವನ್ನು ಮಾಡಿಕೊಂಡು ಬರಲಾಯಿತು. ಇವತ್ತು ದೇವಕಿ ಶೆಟ್ಟಿಗಾರ್ ಅವರಂತೆ ಹಿರಿಯರು ಈ ವೃತ್ತಿಯಲ್ಲಿ ಮತ್ತೇ ತೊಡಗಿಸಿಕೊಳ್ಳಲು ಹಾಗೂ ಹೊಸಬರು ಈ ವೃತ್ತಿಗೆ ಬರುವಂತೆ ಪ್ರೇರೆಪಿಸಲು ಸಾಧ್ಯವಾಗಿದೆ. ಕೈ ಮಗ್ಗ ಬಟ್ಟೆಗಳನ್ನು ಖರೀದಿಸುವ ಮೂಲಕ ಇವರನ್ನು ಪೆÇ್ರೀತ್ಸಾಹಿಸುವಂತೆ ಅವರು ವಿನಂತಿಸಿದರು.
ಸಮಾರಂಭದಲ್ಲಿ ಹಿರಿಯ ಸಾಹಿತಿಗಳಾದ ಡಾ. ಪ್ರಭಾಕರ ನೀರ್‍ಮಾರ್ಗ, ಕೊಡೆತ್ತೂರು ಸಚ್ಚಿದಾನಂದ ಉಡುಪ, ತುಳು ಪರಿಷತ್ ಅಧ್ಯಕ್ಷರಾದ ಶುಭೋದಯ ಆಳ್ವ ಶುಭಕೋರಿ ಮಾತನಾಡಿದರು.
ತಾಳಿಪಾಡಿ ನೇಕಾರರ ಸೇವಾ ಸಂಘದ ಅಧ್ಯಕ್ಷೆ ರುಕ್ಮಿಣಿ ಶೆಟ್ಟಿಗಾರ್, ನಿರ್ವಾಹಕ ನಿರ್ದೇಶಕ ಮಾಧವ ಶೆಟ್ಟಿಗಾರ್ ಉಪಸ್ಥಿತರಿದ್ದರು. ಅಮಿತಾ ಅಶ್ವಿನ್ ಸನ್ಮಾನ ಪತ್ರ ವಾಚಿಸಿದರು. ಕದಿಕೆ ಟ್ರಸ್ಟ್‍ನ ಕಾರ್ಯದರ್ಶಿ ಬಿ.ಸಿ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ತುಳು ಅಕಾಡೆಮಿ ಸದಸ್ಯ ಸಂತೋμï ಶೆಟ್ಟಿ ಹಿರಿಯಡ್ಕ ವಂದಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles