ಮಂಗಳೂರು, ಜ.10:“ಕರಾವಳಿ ಎಂದರೆ ಸೌಂದರ್ಯ, ಜ್ಞಾನ, ಸಂಪತ್ತಿನ ಪರ್ವತ. ದೈವ, ದೇವಾಲಯ, ಶಕ್ತಿದೇವತೆಗಳ ಪ್ರವಾಸಿ ಕ್ಷೇತ್ರ. ವ್ಯಾಪಾರಿಗಳ ನಿಧಿ, ಪ್ರವಾಸಿಗರ ಸ್ವರ್ಗ. ಇಷ್ಟೆಲ್ಲಾ ವಿಶೇಷತೆ ಇರುವಾಗ ಈ ಭಾಗದ ಪ್ರವಾಸೋದ್ಯಮದಲ್ಲಿ ನಾವು ಯಾಕೆ ಹಿಂದುಳಿದಿದ್ದೇವೆ ಎಂಬುದು ಅರ್ಥವಾಗುತ್ತಿಲ್ಲ. ಈ ಭಾಗದ ಪ್ರವಾಸೋದ್ಯಮ ನೀತಿಗೆ ಜನಪ್ರತಿನಿಧಿಗಳು, ಉದ್ಯಮಿಗಳು, ಅಧಿಕಾರಿಗಳು ಸೇರಿದಂತೆ ಎಲ್ಲರ ಸಲಹೆಗಳನ್ನು ಸ್ವೀಕರಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ಭಾಗದ ಅಭಿವೃದ್ಧಿಯೇ ನಮ್ಮ ಸಂಕಲ್ಪ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಮಂಗಳೂರಿನಲ್ಲಿ ಶನಿವಾರ ನಡೆದ ‘ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶ 2026’ ಪೂವ೯ಭಾವಿ ಸಭೆಯಲ್ಲಿ ಮಾತನಾಡಿದ ಅವರು . “ನಮ್ಮಲ್ಲಿ 320 ಕಿ ಮೀ ಕರಾವಳಿ ಪ್ರದೇಶವಿದೆ. ಇಲ್ಲಿ ಪ್ರಕೃತಿ ಸಂಪತ್ತಿನ ಜೊತೆಗೆ, ಈ ಭಾಗದ ಹಿರಿಯರು ದೇಶಕ್ಕೆ ಅನೇಕ ಬ್ಯಾಂಕುಗಳನ್ನು ಕೊಟ್ಟಿದ್ದಾರೆ. ಬ್ಯಾಂಕುಗಳಲ್ಲಿ ಶಿಸ್ತು ಕೊಟ್ಟ ಜನ ನೀವು. ಪ್ರಪಂಚದಾದ್ಯಂತ ಈ ಕರಾವಳಿ ಭಾಗದ ಜನ ಕೆಲಸ ಮಾಡುತ್ತಿದ್ದಾರೆ. ಇದು ಶೈಕ್ಷಣಿಕ ಕೇಂದ್ರವೂ ಆಗಿದೆ. ಇಲ್ಲಿರುವಷ್ಟು ಮೆಡಿಕಲ್, ಇಂಜಿನಿಯರ್, ಪಿಯುಸಿ ಕಾಲೇಜು ಬೇರೆ ಯಾವುದೇ ಜಿಲ್ಲೆಯಲ್ಲಿ ಇಲ್ಲ. ನೀವು ಹೆಚ್ಚು ಮಾನವ ಸಂಪನ್ಮೂಲವನ್ನು ತಯಾರು ಮಾಡುತ್ತಿದ್ದೀರಿ. ಆದರೂ ಈ ಭಾಗದ ಪ್ರತಿಭಾವಂತ ಜನರು ಬೆಂಗಳೂರು, ಮುಂಬೈ ಸೇರಿದಂತೆ ಪ್ರಪಂಚದ ಮೂಲೆ ಮೂಲೆಗೆ ಹೋಗುತ್ತಿದ್ದಾರೆ” ಎಂದು ತಿಳಿಸಿದರು.
“ಬಹಳಷ್ಟು ಮಂದಿ ವಿದೇಶದಲ್ಲಿ ಇರುವವರು, ಮುಂಬೈ, ಬೆಂಗಳೂರಿನಲ್ಲಿ ನೆಲೆಸಿರುವ ಉದ್ಯಮಿಗಳು ತಮ್ಮ ಸ್ವಂತ ಊರಲ್ಲಿ ಏನಾದರೂ ಮಾಡಬೇಕು ಎನ್ನುವ ಆಸಕ್ತಿ ಹೊಂದಿದ್ದಾರೆ. ಅವರುಗಳು ಸರ್ಕಾರದಿಂದ ಅನುಕೂಲ ಮಾಡಿಕೊಟ್ಟರೆ ಬಂಡವಾಳ ಹೂಡುವುದಾಗಿ ತಿಳಿಸಿದ್ದಾರೆ. ಈ ಕಾರಣಕ್ಕೆ ನಾನು ವಿಧಾನಸಭೆ ಸೇರಿದಂತೆ ಹಲವಾರು ಕಡೆ ಇದರ ಬಗ್ಗೆ ಮಾತನಾಡಿದ್ದೇನೆ” ಎಂದರು.“ಈ ಬಗ್ಗೆ ಬೆಂಗಳೂರಿನಲ್ಲಿ ಜನಪ್ರತಿನಿಧಿಗಳ ಜೊತೆ ಚರ್ಚೆ ಮಾಡಿದಾಗ ಮಂಗಳೂರಿನಲ್ಲೇ ಈ ವಿಚಾರವಾಗಿ ಚರ್ಚೆ ಮಾಡೋಣ ಎಂದು ಹೇಳಿದರು. ಜತೆಗೂಡುವುದು ಆರಂಭ, ಜತೆಗೂಡಿ ಚರ್ಚೆಸುವುಗು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು ಎಂದು ನಾನು ನಂಬಿದ್ದೇನೆ. ಹೀಗಾಗಿ ಇಂದು ನಿಮ್ಮ ಜೊತೆ ಚರ್ಚೆ ಮಾಡಲು ಬಂದಿದ್ದೇನೆ. ನಮ್ಮ ಈ ಪ್ರಯತ್ನಕ್ಕೆ ನಾವು ಕೈಜೊಡಿಸುತ್ತೇವೆ ಎಂದು ಪಕ್ಷಾತೀತವಾಗಿ ಜನಪ್ರತಿನಿಧಿಗಳು ಮುಂದಾಗಿದ್ದಾರೆ. ಈ ಭಾಗದ ಅಭಿವೃದ್ಧಿ ಮಾಡಲು ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಿ, ಈ ಭಾಗದಲ್ಲಿ ಉದ್ಯೋಗ ಸೃಷ್ಟಿಸಿ ಎಲ್ಲರೂ ಬೆಳೆಯುವಂತಾಗಲಿ ಎಂಬುದು ಎಲ್ಲರ ಇಚ್ಛಾಶಕ್ತಿಯಾಗಿದೆ. ಇಲ್ಲಿ ರಾಜಕೀಯ ಮುಖ್ಯವಲ್ಲ. ನಮಗೆ ಸಿಕ್ಕ ಅವಕಾಶದಲ್ಲಿ ನಾವು ಏನು ಮಾಡುತ್ತೇವೆ ಅದು ಶಾಶ್ವತವಾಗಿ ಉಳಿಯಲಿದೆ” ಎಂದರು.
“ಈ ಭಾಗಕ್ಕೆ ಮತ್ತೆ ಮರುಜೀವ ನೀಡಲು ಈ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಅಗತ್ಯವಿದೆ. ಈ ಭಾಗ ರಾತ್ರಿ 7ರ ನಂತರ ಸ್ತಬ್ಧವಾಗುತ್ತದೆ ಎಂದು ನಾನು ಈ ಹಿಂದೆ ಹೇಳಿದ್ದೇನೆ. ಕೆಲವರು ಸ್ವಾಗತಿಸಿದರು, ಕೆಲವರು ಟೀಕಿಸಿದರು. ನನ್ನ ಮಾತನ್ನು ಸುಳ್ಳು ಮಾಡುವ ಛಲ ಬರಲಿ ಎಂದು ನಾನು ಟೀಕೆ ಮಾಡಿದ್ದೆ. ಇಂದು ನಾನು ಎಲ್ಲಾ ಉದ್ಯಮದವರನ್ನು ಈ ಸಮಾವೇಶಕ್ಕೆ ಆಹ್ವಾನಿಸಿದ್ದೇನೆ. ನಿಮ್ಮ ಅಭಿಪ್ರಾಯ ಸ್ವೀಕರಿಸಲು ನಾವು ಬದ್ಧವಾಗಿದ್ದೇವೆ. ನೀವು ಮುಕ್ತವಾಗಿ ನಿಮ್ಮ ಸಲಹೆಗಳನ್ನು ನೀಡಿ, ನಿಮ್ಮ ಸಲಹೆ ಅಭಿಪ್ರಾಯಗಳನ್ನು ಒಟ್ಟು ಸೇರಿಸಿ ಹಣಕಾಸು ಸ್ಥಿತಿಗೆ ಅನುಗುಣವಾಗಿ ನಾವು, ಸಿಎಂ, ಪ್ರವಾಸೋದ್ಯಮ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಚರ್ಚೆ ಮಾಡಿ ಸಚಿವ ಸಂಪುಟದ ಮುಂದೆ ಪ್ರಸ್ತಾಪ ಮಾಡುತ್ತೇವೆ” ಎಂದರು.
ವಿಧಾನಸಭೆ ಸ್ಪೀಕರ್ ಯು ಟಿ ಖಾದರ್, ಸಚಿವರಾದ ದಿನೇಶ್ ಗುಂಡೂರಾವ್, ಲಕ್ಷ್ಮಿ ಹೆಬ್ಬಾಳ್ಕರ್, ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ರಾಜೇಗೌಡ, ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು.


