35.3 C
Karnataka
Thursday, May 14, 2026

ಆಶಕ್ತರ ಪಾಲಿನ ಆಶಾಕಿರಣ ದೀಪಕ್.ಜಿ. ಮಂಗಳೂರು ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿಗೆ ಆಯ್ಕೆ

ಮಂಗಳೂರು : ಅನಾರೋಗ್ಯ ಪೀಡಿತ ಬಡವರ ಚಿಕಿತ್ಸೆಗೆ ನೆರವು, ಸೂರಿಲ್ಲದ ಬಡ ಕುಟುಂಬಗಳಿಗೆ ಮನೆ ನಿರ್ಮಾಣ, ಉಚಿತ ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ಸರ್ಕಾರಿ ಶಾಲೆಗಳ ಶೌಚಾಲಯ ಸ್ವಚ್ಛತಾ ಅಭಿಯಾನ..ಹೀಗೆ ಹತ್ತು ಹಲವು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಬೆಳ್ತಂಗಡಿಯ ಸಮಾಜ ಸೇವಕ ದೀಪಕ್.ಜಿ.ಅವರು ಮಂಗಳೂರು ಪ್ರೆಸ್ ಕ್ಲಬ್‌ನ 2025-26ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ನೇತೃತ್ವದ ಸಮಿತಿ ಆಯ್ಕೆ ನಡೆಸಿದ್ದು, ಪ್ರಶಸ್ತಿಯು 10,001 ರೂ.ನಗದು, ಪ್ರಶಸ್ತಿ ಫಲಕ , ಸ್ಮರಣಿಕೆ ಒಳಗೊಂಡಿದೆ. ಮೇ 24ರಂದು ಮಂಗಳೂರಿನ ರೆಡ್ ಕ್ರಾಸ್ ಶತಮಾನೋತ್ಸವ ಭವನದಲ್ಲಿ ನಡೆಯಲಿರುವ ಮಂಗಳೂರು ಪ್ರೆಸ್ ಕ್ಲಬ್ ದಿನಾಚರಣೆಯಲ್ಲಿ ದೀಪಕ್.ಜಿ. ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರೆಸ್ ಕ್ಲಬ್ ನ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.‌

ಖಾಸಗಿ ಬಸ್ ನಲ್ಲಿ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದ ಬಡ ಕುಟುಂಬದ ಹಿನ್ನೆಲೆಯ ದೀಪಕ್.ಜಿ. ಆಶಕ್ತರ ಸೇವೆಯನ್ನೇ ಉಸಿರಾಗಿಸಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಬಡವರ ಸೇವೆಗಾಗಿ ಪರಿಸರದ ಸಮಾನ ಮನಸ್ಕ ಯುವಕರನ್ನು ಒಗ್ಗೂಡಿಸಿ ರಾಜಕೇಸರಿ ಹೆಸರಿನ ಟ್ರಸ್ಟ್ ಸ್ಥಾಪಿಸಿದ್ದಾರೆ. ದಾನಿಗಳ ನೆರವು ಪಡೆದು ಟ್ರಸ್ಟ್ ಮೂಲಕ 34ಬಡ ಕುಟುಂಬಗಳಿಗೆ ಉಚಿತವಾಗಿ ಮನೆ ನಿರ್ಮಾಣ, ಸ್ವ ಉದ್ಯೋಗಕ್ಕಾಗಿ 21ಹೊಲಿಗೆ ಯಂತ್ರ ವಿತರಣೆ, 38ಮಂದಿ ವಿಕಲಚೇತನರಿಗೆ ವೀಲ್ಚೇರ್ ವಿತರಣೆ, ಗ್ರಾಮಾಂತರ ಪ್ರದೇಶಗಳಲ್ಲಿ ಆನೇಕ ಉಚಿತ ಆರೋಗ್ಯ ತಪಾಸಣಾ ಶಿಬಿರ, ಅನಾರೋಗ್ಯ ಪೀಡಿತ ಬಡ ಮಕ್ಕಳ ಚಿಕಿತ್ಸೆಗೆ ನೆರವು, 12 ಜೋಡಿಗೆ ಸಾಮೂಹಿಕ ವಿವಾಹ, ಸರ್ಕಾರಿ ಶಾಲೆಗಳ ಉಳಿವಿಗೆ ಹೋರಾಟ, ಕ್ರೀಡೆ, ಕಲೆ, ಸಂಸ್ಕೃತಿ ಬಗ್ಗೆ ಜಾಗೃತಿ ಸಹಿತ 600ಕ್ಕೂ ಅಧಿಕ ಸೇವಾ ಯೋಜನೆಗಳನ್ನು ಕಾರ್ಯಗತಗೊಳಿಸಿದ ಸಜ್ಜನ ಸಮಾಜ ಸೇವಕ.

  • ಸೇವೆಗೆ ನಾಂದಿ :
    ಪರಿಸರದಲ್ಲಿ ಯಾರೇ ಸಂಕಷ್ಟದಲ್ಲಿದ್ದರೂ ನೆರವಿಗೆ ಧಾವಿಸುವ ಅಪತ್ಭಾಂದವ ದೀಪಕ್ ಬೆಳ್ತಂಗಡಿ ಸಮೀಪದ ರೆಂಕೆದಗುತ್ತು ಎನ್ನುವ ಗ್ರಾಮೀಣ ಪ್ರದೇಶದ ನಿವಾಸಿ. ತಂದೆ ಬಿ.ಗೋಪಾಲ ವೃತ್ತಿಯಲ್ಲಿ ಚಾಲಕರು. ತಾಯಿ ಕುಸುಮಾ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಉದ್ಯೋಗಿ. ಪ್ರೌಢ ಶಿಕ್ಷಣದ ಬಳಿಕ ಜೀವನೋಪಾಯಕ್ಕಾಗಿ ಬಸ್ ನಿರ್ವಾಹಕನಾಗಿ ದೀಪಕ್ ವೃತ್ತಿಬದುಕು ಆರಂಭಿಸಿ ದ್ದರು. ತನ್ನ ವೃತ್ತಿಯಲ್ಲಿ ಸೀಮಿತ ಆದಾಯವಿದ್ದರೂ ಯಾರಾದರೂ ಸಹಾಯ ಯಾಚಿಸಿದರೆ ದಿನದ ದುಡಿಮೆಯ ಹಣವನ್ನೇ ನೀಡುವ ಉದಾರ ಮನಸ್ಸು ದೀಪಕ್ ಅವರದ್ದು, ಊರಿನಲ್ಲಿ ನಾಲ್ಕು ವರ್ಷದ ಮಗುವೊಂದು ಹೃದಯ ರೋಗ ಸಮಸ್ಯೆಯಿಂದ ಬಳಲುತ್ತಿದ್ದು ಹೆತ್ತವರು ಚಿಕಿತ್ಸೆಗೆ ಹಣವಿಲ್ಲದೆ ಪರದಾಡುವ ಸ್ಥಿತಿಯನ್ನು ಅರಿತ ದೀಪಕ್ ಗೆಳೆಯರ ನೆರವಿನಲ್ಲಿ ಹಣ ಸಂಗ್ರಹಿಸಿದರು. ಚಿಕಿತ್ಸೆಯ ವೆಚ್ಚ ಭರಿಸಿ ಮಗುವಿನ ಜೀವ ಉಳಿಸಲು ನೆರವಾದರು. ಈ ಘಟನೆ ಅವರ ಸೇವಾ ಕಾರ್ಯಗಳಿಗೆ ನಾಂದಿಯಾಯತು.
  • ರಾಜಕೇಸರಿ ಟ್ರಸ್ಟ್:
    2012ರಲ್ಲಿ ಬೆಳ್ತಂಗಡಿಯಲ್ಲಿ ಆರಂಭವಾದ ರಾಜಕೇಸರಿ ಸೇವಾ ಟ್ರಸ್ಟ್ ಈಗ ಜಿಲ್ಲಾ ಮಟ್ಟಕ್ಕೆ ವಿಸ್ತರಣೆಯಾಗಿದೆ. ಟ್ರಸ್ಟ್ ನಲ್ಲಿ 23 ಮಂದಿ ಪದಾಧಿಕಾರಿಗಳು ಇದ್ದರೆ, ಸದಸ್ಯರ ಸಂಖ್ಯೆ 400ರ ಗಡಿ ದಾಟಿದೆ. ದೀಪಕ್ ಅವರೊಂದಿಗೆ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡವರು ಯಾರೂ ಶ್ರೀಮಂತರಲ್ಲ. ಆಟೋ ಚಾಲಕರು, ಬಸ್ ಚಾಲಕ, ಮೆಕ್ಯಾನಿಕ್, ಪೈಂಟರ್, ಪ್ಲಂಬರ್, ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರು. ಆರಂಭದಲ್ಲಿ ಸಂಘಟನೆಯ ಸದಸ್ಯರು ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಸೇರಿ ತಮ್ಮ ದುಡಿಮೆಯ ಹಣದ ಒಂದು ಭಾಗವನ್ನು ಸೇವಾ ಕಾರ್ಯಗಳಿಗೆ ವಿನಿಯೋಗಿಸುತ್ತಿದ್ದರು, ಕ್ರಮೇಣ ಟ್ರಸ್ಟ್ ನ ಸೇವಾ ಕಾರ್ಯಗಳು ವಿಸ್ತಾರಗೊಂಡವು, ಹಣ ಸಂಗ್ರಹಕ್ಕಾಗಿ ಟ್ರಸ್ಟ್ ಸದಸ್ಯರು ಜಾತ್ರೆ, ಉತ್ಸವ ಬಸ್ ನಿಲ್ದಾಣಗಳಲ್ಲಿ ಕುಡಿಯುವ ನೀರನ್ನು ಮಾರಾಟ ಮಾಡುತ್ತಾ ಅದರಲ್ಲಿ ಬಂದ ಲಾಭಾಂಶವನ್ನು ಅಸಹಾಯಕರು, ನಿರ್ಗತಿಕರು, ಅನಾರೋಗ್ಯಪೀಡಿತರ ಸೇವೆಗೆ ನೀಡಿದರು. ಕೊರೊನಾ ಸಂದರ್ಭ ರಾಜಕೇಸರಿ ತಂಡದ ಸದಸ್ಯರು 85ಮೃತದೇಹಗಳ ಅಂತಿಮ ಸಂಸ್ಕಾರ ನಡೆಸಿದ್ದಾರೆ,
    *ಶಾಲಾ ಶೌಚಾಲಯದ ಸ್ವಚ್ಛತೆ
    ಸರ್ಕಾರಿ ಶಾಲೆಯ ಶೌಚಾಲಯಗಳನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿ, ನವೀಕರಿಸುವ ಟ್ರಸ್ಟ್ ಸದಸ್ಯರ ಅಭಿಯಾನದಲ್ಲಿ ಬಂಟ್ವಾಳ, ಬೆಳ್ತಂಗಡಿ, ಮಂಗಳೂರಿನಲ್ಲಿ ಈಗಾಗಲೇ 16ಕ್ಕೂ ಅಧಿಕ ಶೌಚಾಲಯಗಳಿಗೆ ಹೊಸ ರೂಪ ನೀಡಲಾಗಿದೆ. ಕಳೆದ 10 ವರ್ಷದಲ್ಲಿ ಟ್ರಸ್ಟ್ ಏರ್ಪಡಿಸಿದ ಶಿಬಿರಗಳಲ್ಲಿ 14,698 ಮಂದಿ ರಕ್ತದಾನ ಮಾಡಿದ್ದಾರೆ. ಸ್ವತಃ ದೀಪಕ್ ಅವರು 37 ಬಾರಿ ರಕ್ತದಾನ ಮಾಡಿದ್ದಾರೆ. ಟ್ರಸ್ಟ್ ಮೂಲಕ ಒಂದೇ ದಿನ 543 ಮಂದಿ ನೇತ್ರದಾನ ನೋಂದಣಿ ಮಾಡಿರುವುದು ದಾ ಖಲೆಯಾಗಿದೆ. ಅನಾಥಾಶ್ರಮಗಳಿಗೆ ಮಧ್ಯಾಹ್ನದ ಊಟ, ಗ್ರಾಮಾಂತರ ಭಾಗಗಳಲ್ಲಿ ಆರೋಗ್ಯ ತಪಾಸಣೆ, ಅಂಗವಿಕಲರ ಕಲ್ಯಾಣ ಕಾರ್ಯಕ್ರಮ, ಅನಾರೋಗ್ಯಪೀಡಿತರಿಗೆ ಚಿಕಿತ್ಸೆಗೆ ನೆರವು ನೀಡುತ್ತಿದೆ
  • ಬಡವರಿಗೆ ಸೂರು :
    ಸೂರಿಲ್ಲದ ಬಡವರಿಗೆ ಮನೆ ನಿರ್ಮಾಣ ಕಾರ್ಯದಲ್ಲಿ ದೀಪಕ್ ಅವರ ಟ್ರಸ್ಟ್ ತೊಡಗಿಸಿಕೊಂಡಿದೆ. ಇದುವರೆಗೆ 34 ಮನೆ ನಿರ್ಮಿಸಿ ಹಸ್ತಾಂತರ ಮಾಡಿದ್ದಾರೆ. ನೂರಾರು ಮಂದಿಯ ಬಾಳಿಗೆ ಬೆಳಕಾದ ದೀಪಕ್ ಅವರು ಪ್ರಸ್ತುತ ಬೆಳ್ತಂಗಡಿಯಲ್ಲಿ ಆರೋಗ್ಯ ಇಲಾಖೆಯ ಅನುದಾನದಿಂದ ನಡೆಯುತ್ತಿರುವ ಸಾನಿಧ್ಯ ಕೌಶಲ ತರಬೇತಿ ಕೇಂದ್ರದ ಬಸ್ ಚಾಲಕನಾಗಿ ದುಡಿಯುತ್ತಿದ್ದಾರೆ. ಜತೆಗೆ ಬೆಳ್ತಂಗಡಿಯಲ್ಲಿ ತನ್ನದೇ ಆದ ಸಣ್ಣ ವ್ಯಾಪಾರ ನಡೆಸುತ್ತಿದ್ದಾರೆ. ಸಮಾಜ ಸೇವೆಯನ್ನೇ ಉಸಿರಾಗಿಸಿ ದುಡಿಯುತ್ತಿರುವ ದೀಪಕ್ ಅವರ ಸೇವಾ ಕಾರ್ಯಗಳು ಯುವ ಜನತೆಗೆ ಮಾದರಿಯಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles