ಮ೦ಗಳೂರು: ಕಾರನ್ನು ಪೊಲೀಸ್ ಠಾಣೆಯಿಂದ ಬಿಡಿಸಿಕೊಡಲು ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆಯ ಸಿಬ್ಬಂದಿ 5000 ರೂ. ಲಂಚಕ್ಕೆ ಬೇಡಿಕೆ ಇಟ್ಟು ಹಣವನ್ನು ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುತ್ತಾರೆ. ಪೊಲೀಸ್ ಠಾಣೆಯ ಸಿಹೆಚ್‌ಸಿ ತಸ್ಲಿಂ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಸಿಬ್ಬ೦ದಿ. ಸಿಬ್ಬಂದಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.

ಕಾರು ಮತ್ತು ಸ್ಕೂಟರ್ ಮಧ್ಯೆ ನಂತೂರು ಸರ್ಕಲ್‌ನಲ್ಲಿ ಎಕ್ಸಿಡೆಂಟ್ ಆಗಿದ್ದು, ಈ ಕುರಿತು ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆಯ ಸಿಬ್ಬಂದಿ ತಸ್ಲಿಂ ಕಾರು, ಕಾರಿನ ದಾಖಲಾತಿಗಳನ್ನು ಪೊಲೀಸ್ ಠಾಣೆಗೆ ತಂದು ಕೊಡುವಂತೆ ತಿಳಿಸಿದಂತೆ ಪಿರ್ಯಾದಿದಾರರು ಕಾರು, ಕಾರಿನ ದಾಖಲಾತಿಗಳನ್ನು ಪೊಲೀಸ್ ಠಾಣೆಗೆ ನೀಡಿರುತ್ತಾರೆ. ಕಾರನ್ನು ಪೊಲೀಸ್ ಠಾಣೆಯಿಂದ ಬಿಡಿಸಿಕೊಡಲು ಸಿಬ್ಬಂದಿ ತಸ್ಲಿಂ 50,000 ರೂ . ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು ಪಿರ್ಯಾದಿದಾರರು ತನ್ನ ವಕೀಲರಲ್ಲಿ ವಿಷಯವನ್ನು ತಿಳಿಸಿ ವಕೀಲರು ಠಾಣೆಗೆ ಭೇಟಿ ನೀಡಿ ಪಿರ್ಯಾದಿದಾರರ ಬಾಬ್ತು ಕಾರನ್ನು ಬಿಟ್ಟುಕೊಡುವಂತೆ ಕೇಳಿಕೊಂಡಾಗ ಪಿರ್ಯಾದಿದಾರರು ಕಾರನ್ನು ಸ್ವೀಕರಿಸಿರುತ್ತಾರೆ ಎಂದು ಸಹಿ ಪಡೆದುಕೊಂಡು ಕಾರನ್ನು ಪೊಲೀಸ್ ಠಾಣೆಯಿಂದ ಬಿಟ್ಟುಕೊಟ್ಟಿರುವುದಿಲ್ಲ. ನಂತರ ತಸ್ಲಿಂ ಕಾರನ್ನು ಪಿರ್ಯಾದಿದಾರರಿಗೆ ಬಿಟ್ಟುಕೊಡಲು ಪಿರ್ಯಾದಿದಾರರ ಮೊಬೈಲ್ ಅನ್ನು ಬಲವಂತದಿಂದ ಪಡೆದುಕೊಂಡು ಕಾರನ್ನು ಬಿಟ್ಟು ಕಳುಹಿಸಿರುತ್ತಾರೆ.
ಪಿರ್ಯಾದಿದಾರರು ತನ್ನ ಮೊಬೈಲ್ ಪೋನ್ ಅನ್ನು ತನಗೆ ವಾಪಾಸ್ಸು ಕೊಡಲು ತಸ್ಲಿಂ ಅವರಲ್ಲಿ ಕೇಳಿಕೊಂಡಾಗ 50,000 ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟು ಮೊಬೈಲ್ ಪೋನ್ ಅನ್ನು ಹಿಂತಿರುಗಿಸಬೇಕಾದರೆ ಓರಿಜಿನಲ್ ಲೈಸನ್ಸ್ ಅನ್ನು ಠಾಣೆಗೆ ತಂದುಕೊಡುವಂತೆ ತಿಳಿಸಿರುತ್ತಾರೆ. ನಂತರ ಪಿರ್ಯಾದಿದಾರರು ಓರಿಜಿನಲ್ ಲೈಸನ್ಸ್ ಅನ್ನು ನೀಡಿರುತ್ತಾರೆ.
ತಸ್ಲಿಂ ಠಾಣೆಯ ಮತ್ತೋರ್ವ ಸಿಬ್ಬಂದಿ ವಿನೋದ್ ಅವರ ಮುಖಾಂತರ 30,000 ರೂ ಲಂಚದ ಹಣ ಕೊಟ್ಟು ಓರಿಜಿನಲ್ ಲೈಸನ್ಸ್ ಪಡೆದುಕೊಂಡು ಹೋಗಲು ತಿಳಿಸಿದ್ದು, ಪಿರ್ಯಾದಿದಾರರು ಜುಲೈ 9 ರಂದು ಕದ್ರಿ ಟ್ರಾಪಿಕ್ ಪೊಲೀಸ್ ಠಾಣೆಗೆ ಹೋಗಿ ತಸ್ಲಿಂ ಅವರನ್ನು ಭೇಟಿ ಮಾಡಿ ಮಾತನಾಡಿದಾಗ ಓರಿಜಿನಲ್ ಲೈಸನ್ಸ್ ನೀಡಲು 10,000- ಹಣವನ್ನು ನೀಡುವಂತೆ ತಿಳಿಸಿರುತ್ತಾರೆ. ಈ ಬಗ್ಗೆ ಪಿರ್ಯಾದಿದಾರರು ತನ್ನಲ್ಲಿ 500 ರೂ . ಇದೆ ಎಂದಾಗ 5000 ರೂ ಇಲ್ಲದೇ ಠಾಣೆ ಕಡೆಗೆ ಬರಬೇಡ ಎಂದು ಬೈದು ಕಳುಹಿಸಿರುತ್ತಾರೆ. ಪಿರ್ಯಾದಿದಾರರು ಕಡಿಮೆ ಮಾಡಿ ಎಂದಾಗ ಓರಿಜಿನಲ್ ಲೈಸನ್ಸ್ ನೀಡಲು 5000 ರೂ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ. ಪಿರ್ಯಾದಿದಾರರಿಗೆ ಕಾನೂನು ಬದ್ಧವಾಗಿ ಮಾಡಬೇಕಾದ ಸರ್ಕಾರಿ ಕೆಲಸಕ್ಕೆ ಲಂಚ ನೀಡಿ ಕೆಲಸ ಮಾಡಿಸಿಕೊಳ್ಳಲು ಇಚ್ಛೆ ಇಲ್ಲದ ಕಾರಣ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ. ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಕದ್ರಿ ಟ್ರಾಪಿಕ್ ಪೊಲೀಸ್ ಠಾಣೆಯ ಸಿಬ್ಬಂದಿ ತಸ್ಲಿಂ ಮತ್ತು ವಿನೋದ್ ಅವರ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ.
ಜು. 10 ರಂದು ತಸ್ಲಿಂ ಪಿರ‍್ಯಾದುದಾರರಿಂದ 5000 ರೂ. ಲಂಚದ ಹಣವನ್ನು ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಕುಮಾರಚಂದ್ರ, ಪೊಲೀಸ್ ಅಧೀಕ್ಷಕರು (ಪ್ರಭಾರ), ಕರ್ನಾಟಕ ಲೋಕಾಯುಕ್ತ, ಮಂಗಳೂರು ವಿಭಾಗ ಅವರ ಮಾರ್ಗದರ್ಶನದಲ್ಲಿ, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಡಾ. ಗಾನ ಪಿ ಕುಮಾರ್, ಸುರೇಶ್ ಕುಮಾರ್.ಪಿ, ಪೊಲೀಸ್ ನಿರೀಕ್ಷಕರಾದ ಭಾರತಿ ಜಿ, ಚಂದ್ರಶೇಖರ್ ಕೆ.ಎನ್ . ಅವರು ಮಂಗಳೂರು ಲೋಕಾಯುಕ್ತ ಸಿಬ್ಬಂದಿಗಳ ಜೊತೆ ಕೈಗೊಂಡಿರುತ್ತಾರೆ.


