ನವದೆಹಲಿ: ಮಂಗಳೂರನ್ನು ಪ್ರಮುಖ ’ಡೇಟಾ ಸೆಂಟರ್ ಹಬ್ ’ಆಗಿ ಅಭಿವೃದ್ಧಿಪಡಿಸುವ ಮೂಲಕ ಭಾರತದ ಡಿಜಿಟಲ್ ಬೆಳವಣಿಗೆಯಲ್ಲಿ ನೆಚ್ಚಿನ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಸ್. ಕೃಷ್ಣನ್ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ.
ನವದೆಹಲಿಯಲ್ಲಿ ಇಂದು ಕಾರ್ಯದರ್ಶಿ ಕೃಷ್ಣನ್ ಅವರನ್ನು ಭೇಟಿಯಾದ ಸಂಸದರು, ಮಂಗಳೂರು ನಗರ ಹೊಂದಿರುವ ಅಗಾಧ ಸಾಮರ್ಥ್ಯ, ವ್ಯೂಹಾತ್ಮಕ ಅನುಕೂಲತೆ ಹಾಗೂ ಇಕೋಸಿಸ್ಟಮ್ ಬಗ್ಗೆ ಮನವರಿಕೆ ಮಾಡಿದ್ದಾರೆ. ಇಲ್ಲಿರುವ ಭೌಗೋಳಿಕ, ತಾಂತ್ರಿಕವಾದ ಮೂಲಸೌಕರ್ಯಗಳ ಬಗ್ಗೆ ವಿವರಿಸಿದ ಅವರು, ನಮ್ಮ ಕರಾವಳಿ ಕಡಿಮೆ ಭೂಕಂಪನ ಅಪಾಯವಿರುವ, ಧಾರಾಳ ನೀರಿನ ಸಂಪನ್ಮೂಲ ಮತ್ತು ಸಮುದ್ರಾಂತರ ಇಂಟರ್ನೆಟ್ ಕೇಬಲ್ ಮಾರ್ಗಗಳಿಗೆ ಹತ್ತಿರವಿರುವ ಪ್ರದೇಶವಾಗಿದ್ದು, ಇಲ್ಲಿ ಕೇಬಲ್ ಲ್ಯಾಂಡಿಂಗ್ ಸ್ಟೇಷನ್ (Cable Landing Station) ಸ್ಥಾಪಿಸಲು ಸೂಕ್ತ ಸ್ಥಳವಾಗಿದೆ. ಇಂತಹ ಮೂಲಸೌಕರ್ಯವು ಪ್ರಾದೇಶಿಕ ಇಂಟರ್‌ನೆಟ್ ವೇಗವನ್ನು ಸುಧಾರಿಸುವುದರ ಜೊತೆಗೆ ಭಾರತದ ಡೇಟಾ ಸಾಮರ್ಥ್ಯ ಮತ್ತು ಭದ್ರತೆಯನ್ನು ಗಣನೀಯವಾಗಿ ಹೆಚ್ಚಿಸುತ್ತದೆ ಎಂದು ವಿವರಿಸಿದ್ದಾರೆ.
ಬೃಹತ್ ಡೇಟಾ ಸೆಂಟರ್‌ಗಳ ಸ್ಥಾಪನೆಯು ಜಾಗತಿಕವಾಗಿ ಈಗ ಎಲ್ಲೆಡೆ ಅವಶ್ಯಕ ಮೂಲಸೌಕರ್ಯವೆಂದು ಪರಿಗಣಿಸಲಾಗುತ್ತಿದೆ. ಕೃತಕ ಬುದ್ಧಿಮತ್ತೆ(AI), ಕ್ಲೌಡ್ ಕಂಪ್ಯೂಟಿಂಗ್, ಹಣಕಾಸು ವ್ಯವಸ್ಥೆಗಳು ರಾಷ್ಟ್ರೀಯ ಭದ್ರತೆ ಹೀಗೆ ಪ್ರತಿಯೊಂದು ಕ್ಷೇತ್ರ ಹಾಗೂ ಆಯಕಟ್ಟಿನ ಜಾಗಗಳಲ್ಲಿ ಅತ್ಯವಶ್ಯಕ ತಂತ್ರಜ್ಞಾನ ವ್ಯವಸ್ಥೆಯಾಗಿದೆ. ಹೀಗಿರುವಾಗ ಮಂಗಳೂರನ್ನು ಭಾರತದ ಪ್ರಾದೇಶಿಕ ಡೇಟಾ ಬ್ಯಾಕ್‌ಬೋನ್ ಆಗಿ ಬೆಳೆಸುವುದಕ್ಕೆ ವಿಪುಲ ಅವಕಾಶ ಹಾಗೂ ಸಾಮರ್ಥ್ಯವನ್ನು ಹೊಂದಿದೆ. ಈ ಹಿನ್ನಲೆ ಖಾಸಗಿ ಹೂಡಿಕೆಯನ್ನು ಆಕರ್ಷಿಸಲು ಮಂಗಳೂರಿನಲ್ಲಿ ಪ್ರತ್ಯೇಕ ಡೇಟಾ ಸೆಂಟರ್ ವಿಶೇಷ ಆರ್ಥಿಕ ವಲಯವನ್ನು (DCSEZ) ಸ್ಥಾಪಿಸಲು ಅಗತ್ಯ ಕ್ರಮ ಹಾಗೂ ಪೂರಕ ನೀತಿಯನ್ನು ರೂಪಿಸಬೇಕೆಂದು ಇದೇ ವೇಳೆ ಸಂಸದರು ಸಚಿವಾಲಯಕ್ಕೆ ಸಲಹೆ ನೀಡಿದ್ದಾರೆ
ಭೇಟಿ ಬಳಿಕ ಪ್ರತಿಕ್ರಿಯಿಸಿದ ಕ್ಯಾ. ಚೌಟ, “ಬೆಂಗಳೂರಿನಂಥ ಐಟಿ ಸಿಟಿಗಳ ಆಚೆಗೂ ಐಟಿ ಕಾರ್ಯ ಕ್ಷೇತ್ರದ ಅಭಿವೃದ್ಧಿಯನ್ನು ಉತ್ತೇಜಿಸುವ ಮತ್ತು ನಮ್ಮ ಪ್ರದೇಶವನ್ನು ಸಿಲಿಕಾನ್ ಬೀಚ್ ಆಗಿ ನಿರ್ಮಿಸುವ ಹಾಗೂ ಡೇಟಾ ಸೆಂಟರ್ ಹಬ್ ಆಗಿ ಪರಿವರ್ತಿಸುವ ಉದ್ದೇಶದಿಂದ ಮಂಗಳೂರಿನಲ್ಲಿ ಈ ಕುರಿತು ಸಾಧ್ಯಾ-ಸಾಧ್ಯತೆಗಳ ಬಗ್ಗೆ ನನ್ನ ದೂರದೃಷ್ಟಿ ಯೋಚನೆಗಳನ್ನು ಹಂಚಿಕೊಂಡಿದ್ದೇನೆ. ಇಂಡಿಯಾ AI ಮಿಷನ್‌ನ ಯೋಜನೆಗಳನ್ನು ಮಂಗಳೂರಿಗೆ ತರುವ ಬಗ್ಗೆಯೂ ಚರ್ಚಿಸಿದ್ದೇನೆ. ಇದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿಕಸಿತ ಭಾರತದ ಕನಸಿಗೆ ಮಹತ್ವದ ಕೊಡುಗೆ ನೀಡಲಿದೆ. ಇದರ ಜೊತೆಗೆ, ಇದು ವಿಶ್ವಾದ್ಯಂತ ಇರುವ ಮಂಗಳೂರಿನವರಿಗೆ ಬ್ಯಾಕ್ ಟು ಊರಿಗೆ ಬರಲು ಹಾಗೂ ನಮ್ಮ ಕರಾವಳಿಯಲ್ಲಿ ಐಟಿ ಅಭಿವೃದ್ದಿಯಲ್ಲಿ ಭಾಗಿಯಾಗುವುದನ್ನು ಪ್ರೋತ್ಸಾಹಿಸುತ್ತದೆ” ಎಂದರು.


