ಮಂಗಳೂರು: ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯು ಜಾರಿಗೊಳಿಸುತ್ತಿರುವ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ 18 ರಿಂದ 60 ವರ್ಷದೊಳಗಿನ 101 ವರ್ಗಗಳ ಅಸಂಘಟಿತ ಕಾರ್ಮಿಕರು ಹಾಗೂ ಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಮತ್ತು ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿ ಯೋಜನೆಯಡಿ 18 ರಿಂದ 60 ವರ್ಷದೊಳಗಿನ ಖಾಸಗಿ ವಾಣಿಜ್ಯ ವಾಹನ ಚಾಲಕರು, ನಿರ್ವಾಹಕರು, ಕ್ಲೀನರ್, ಗ್ಯಾರೇಜ್ ಕಾರ್ಮಿಕರು ಹಾಗೂ ಮೋಟಾರು ಸಾರಿಗೆಗೆ ಸಂಬಂಧಿಸಿದಂತೆ ಕೆಲಸ ನಿರ್ವಹಿಸುವ ಇನ್ನಿತರ ಕಾರ್ಮಿಕರನ್ನು ಮಂಡಳಿಯ ವೆಬ್ಸೈಟ್ ತಿತಿತಿ.ಞsuತಿssb.ಞಚಿಡಿಟಿಚಿಣಚಿಞಚಿ.gov.iಟಿ ನಲ್ಲಿ ಆನ್ಲೈನ್ ಮೂಲಕ ಸಮೀಪದ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಅಥವಾ ಕಾರ್ಮಿಕ ಇಲಾಖೆಯ ತಾಲೂಕು ಮತ್ತು ಜಿಲ್ಲಾ ಮಟ್ಟದ ಕಛೇರಿಗಳಲ್ಲಿ ನೋಂದಾಯಿಸಿಕೊಳ್ಳಬಹುದು.
ಫಲಾನುಭವಿಗಳು ಉಚಿತವಾಗಿ ನೋಂದಣಿ ಮಾಡಿಕೊಂಡು ಸ್ಮಾರ್ಟ್ ಕಾರ್ಡ್ಗಳನ್ನು ಪಡೆಯಬಹುದು. ಯಾವುದೇ ಹೆಚ್ಚಿನ ಶುಲ್ಕ ಭರಿಸುವ ಅವಶ್ಯಕತೆ ಇರುವುದಿಲ್ಲ.
ಮೋಟಾರು ಸಾರಿಗೆ ಮತ್ತು ಇತರೆ ಸಂಬಂಧಿತ ಕಾರ್ಮಿಕರಿಗೆ ರೂ. 50 ಮೂರು ವರ್ಷಗಳ ಅವಧಿಗೆ ನೋಂದಣಿ ಶುಲ್ಕ ಪಾವತಿಸಬೇಕಾಗಿರುತ್ತದೆ.
ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ದೊರಕುವ ಸೌಲಭ್ಯಗಳು:- ಅಪಘಾತ ಪರಿಹಾರ ಸೌಲಭ್ಯ, ಮರಣ ರೂ.1.ಲಕ್ಷದವರೆಗೆ, ಸಹಜ ಮರಣ ರೂ.10 ಸಾವಿರದವರೆಗೆ, ಆಸ್ಪತ್ರೆ ವೆಚ್ಚ (ಅಪಘಾತ ಪ್ರಕರಣಗಳಲ್ಲಿ ) ರೂ.50 ಸಾವಿರದವರೆಗೆ.
ಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಮತ್ತು ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿ ಯೋಜನೆಯಡಿ ದೊರಕುವ ಸೌಲಭ್ಯಗಳು: ಅಪಘಾತದಿಂದ ಚಾಲಕರು, ನಿರ್ವಾಹಕರು ಹಾಗೂ ಕ್ಲೀನರ್ಗಳು ಮರಣ ಹೊಂದಿದಲ್ಲಿ ಅವರ ನಾಮನಿರ್ದೇಶಿತರಿಗೆ ರೂ.5 ಲಕ್ಷ ಪರಿಹಾರ, ಸಹಜ ಮರಣ ಪರಿಹಾರ, ಅಂತ್ಯಸಂಸ್ಕಾರ ವೆಚ್ಚ ರೂ.25 ಸಾವಿರ, ಶಾಶ್ವತ ದುರ್ಬಲತೆಗೆ ರೂ.2 ಲಕ್ಷದವರೆಗೆ ಪರಿಹಾರ, ತಾತ್ಕಾಲಿಕ ದುರ್ಬಲತೆಗೆ ರೂ 1 ಲಕ್ಷದವರೆಗೆ ಆಸ್ಪತ್ರೆ ವೆಚ್ಚ ಮರುಪಾವತಿ, ಶೈಕ್ಷಣಿಕ ಧನಸಹಾಯ – ಅಪಘಾತದ ಕಾರಣ ನಿಧನರಾದ ಅಥವಾ ಸಂಪೂರ್ಣ ಶಾಶ್ವತ ದುರ್ಬಲತೆ ಹೊಂದಿದ ಫಲಾನುಭವಿಗಳ ಇಬ್ಬರು ಮಕ್ಕಳಿಗೆ ಪದವಿಪೂರ್ವ ವ್ಯಾಸಂಗದವರೆಗೆ ವಾರ್ಷಿಕ 10 ಸಾವಿರ ರೂ.ಗಳ ಶೈಕ್ಷಣಿಕ ಧನಸಹಾಯ, ನೋಂದಾಯಿತ ಫಲಾನುಭವಿಯ ಗರಿಷ್ಠ ಇಬ್ಬರು ಮಕ್ಕಳಿಗೆ 12ನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗೆ ಶೈಕ್ಷಣಿಕ ಧನಸಹಾಯ.
ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ನೋಂದಾಯಿತ ಒಟ್ಟು ಸ್ವೀಕೃತವಾದ 79,308 ಸ್ಮಾರ್ಟ್ ಕಾರ್ಡ್ಗಳಲ್ಲಿ 66,130 ಸ್ಮಾರ್ಟ್ ಕಾರ್ಡ್ಗಳನ್ನು ವಿತರಿಸಲಾಗಿದ್ದು, 13,178 ಕಾರ್ಡ್ಗಳು ಬಾಕಿ ಉಳಿದಿರುತ್ತದೆ. ಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಮತ್ತು ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿ ಯೋಜನೆಯಡಿ ನೋಂದಾಯಿತ 35,432 ಸ್ಮಾರ್ಟ್ ಕಾರ್ಡ್ಗಳಲ್ಲಿ 15,694 ಸ್ಮಾರ್ಟ್ ಕಾರ್ಡ್ಗಳನ್ನು ವಿತರಿಸಲಾಗಿದ್ದು 19,738 ಕಾರ್ಡ್ಗಳು ಬಾಕಿ ಉಳಿದಿರುತ್ತದೆ.
ಸ್ಮಾರ್ಟ್ ಕಾರ್ಡ್ ಪಡೆಯಲು ನೋಂದಾಯಿತ ಫಲಾನುಭವಿಗಳಿಗೆ ಆಯಾ ತಾಲೂಕಿನ ಕಾರ್ಮಿಕ ಕಛೇರಿಯಿಂದ ದೂರವಾಣಿ ಕರೆಯನ್ನು ಮಾಡಲಾಗುತ್ತಿದ್ದು, ದೂರವಾಣಿ ಕರೆಯನ್ನು ಸ್ವೀಕರಿಸಿದ ಕಾರ್ಮಿಕರು ಈ ಕೂಡಲೇ ತಾಲ್ಲೂಕಿನ ಕಾರ್ಮಿಕ ನಿರೀಕ್ಷಕರುಗಳ ಕಛೇರಿಗೆ ಭೇಟಿ ನೀಡಬಹುದು.
ನೋಂದಣಿ ಮತ್ತು ಸೌಲಭ್ಯಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ನಗರದ ಯೆಯ್ಯಾಡಿ ಕಾರ್ಮಿಕ ಭವನದಲ್ಲಿರುವ ಕಾರ್ಮಿಕ ಅಧಿಕಾರಿಯವರ ಕಛೇರಿ (ದೂರವಾಣಿ ಸಂಖ್ಯೆ: 08242437479) ಅಥವಾ ಆಯಾ ತಾಲ್ಲೂಕಿನ ಕಾರ್ಮಿಕ ನಿರೀಕ್ಷಕರ ಕಛೇರಿಯನ್ನು ಸಂಪರ್ಕಿಸಬಹುದು ಎಂದು ಮಂಗಳೂರು ವಿಭಾಗ ಸಹಾಯಕ ಕಾರ್ಮಿಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


