ಮ೦ಗಳೂರು: ತನ್ನ ಅಸ್ತಿತ್ವದ ನಲ್ವತ್ತನೇ ವರ್ಷಾಚರಣೆ (1986 – 2026) ಸಂಭ್ರಮದಲ್ಲಿರುವ ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ತನ್ನ ಧ್ಯೇಯೋದ್ದೇಶಗಳಿಗೆ ಪೂರಕವಾಗಿ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾಸಮಾವೇಶವನ್ನು ಆಯೋಜಿಸುತ್ತಿದೆ. ನವೆಂಬರ್ 3 ರ೦ದ 15 ರವರೆಗೆ ಮಂಗಳೂರಿನಲ್ಲಿ ನಡೆಯುವ ಈ ಬೃಹತ್ ಕಾರ್ಯಕ್ರಮದ ಮುಹೂರ್ತ ಮತ್ತು ಲಾಂಛನ ಬಿಡುಗಡೆ ಕಾರ್ಯಕ್ರಮವು ಶುಕ್ರವಾರ ಶಕ್ತಿನಗರದ
ಕಲಾಂಗಣದಲ್ಲಿ ಸಂಜೆ 4 ಗಂಟೆಗೆ ನೆರವೇರಲಿದೆ.
ಕರ್ನಾಟಕ ಸರಕಾರದ ವಿಧಾನ ಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಮಂತ್ರಿ ದಿನೇಶ್
ಗುಂಡೂರಾವ್ ಲಾಂಛನ ಬಿಡುಗಡೆಗೊಳಿಸುವರು. ಗೌರವ ಅತಿಥಿಗಳಾಗಿ ಮಂಗಳೂರು ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹಾಗೂ ಗೋವಾದ ಕಲಾವಿದ ಮೈಕಲ್
ಗ್ರೇಶಿಯಸ್ ಗೌರವ ಅತಿಥಿಗಳಾಗಿ ಉಪಸ್ಥಿತರಿರುವರು ಎ೦ದು ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ ಪಿಂಟೊ ಪತ್ರಿಕಾ ಗೋಷ್ಟಿಯಲ್ಲಿ ತಿಳಿಸಿದರು.
ಈ ಸಂಗೀತ ಮಹಾ ಸಮಾವೇಶದಲ್ಲಿ 12 ದಿನ, 12 ಗಂಟೆ, 12 ನಿಮಿಷಗಳ, ಸಮೂಹ ಗಾಯನದ ಅತೀ ದೀರ್ಘ ಸಮಯದ ಗಿನ್ನೆಸ್ ದಾಖಲೆ ರಚಿಸಲು ಪ್ರಯತ್ನಿಸಲಾಗುವುದು. ಈ ಪ್ರಯತ್ನದಲ್ಲಿ ಕರ್ನಾಟಕ, ಗೋವಾ,
ಮಹಾರಾಷ್ಟ್ರ, ಕೇರಳ ಮತ್ತಿತರ ರಾಜ್ಯಗಳಿಂದಲೂ ಹಾಗೂ ವಿದೇಶಗಳಿಂದಲೂ 6000 ಕ್ಕೂ ಮಿಕ್ಕಿ ಹಾಡುಗಾರರು ಭಾಗವಹಿಸಲಿದ್ದಾರೆ. ಈ ದಾಖಲೆಯಲ್ಲಿ ಕ್ರೈಸ್ತ, ಜಿಎಸ್‌ಬಿ, ದಾಲ್ದಿ, ಕುಡ್ಮಿ, ಖಾರ್ವಿ, ಸಿದ್ದಿ, ಸಿರಿಯನ್
ಆರ್ಥೊಡಾಕ್ಸ್ ಮತ್ತಿತರ ಸಮುದಾಯಗಳ ಗಾಯಕರು ಸುಮಾರು 5000 ಕೊಂಕಣಿ ಹಾಡುಗಳನ್ನು ಹಾಡಲಿದ್ದಾರೆ. ಆ ದಿನಗಳಲ್ಲಿ ಸಂಗೀತಕ್ಕೆ ಸಂಬಂಧಪಟ್ಟ ವಿವಿಧ ಸಂವಾದ ಗೋಷ್ಟಿಗಳನ್ನು ಆಯೋಜಿಸಲಾಗುವುದು. ಸಂಗೀತದಲ್ಲಿ
ಮಹತ್ತರ ಸಾಧನೆಗೈದ ಹಿರಿಯರನ್ನು ಸಮ್ಮಾನಿಸಲಾಗುವುದು, ಕೀರ್ತಿ ಮಂದಿರ ಹಾಗೂ ಸಂಗೀತ ಮತ್ತು ಸಂಸ್ಕೃತಿಗೆ ಸಂಬಂಧಪಟ್ಟ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗುವುದು. ಕೊಂಕಣಿ ಸಂಗೀತಕ್ಕೆ ಮಹೋನ್ನತ ಕೊಡುಗೆ ನೀಡಿದ
ಎರಿಕ್ ಒಝೇರಿಯೊ ಅವರಿಗೆ ಅರ್ಪಣೆಯಾಗಿ ಈ ಕಾರ್ಯಕ್ರಮವನ್ನು ನಡೆಯಲಿದೆ ಎ೦ದವರು ವಿವರಸಿದರು.
ಪತ್ರಿಕಾ ಗೋಷ್ಟಿಯಲ್ಲಿ ರೊಯ್ ಕ್ಯಾಸ್ತೆಲಿನೊ (ಪಿರ್ಜೆಂತ್, ಕಲಾಂಗಣ್), ಜೊಯೆಲ್ ಪಿರೇರಾ (ಸಂಗೀತ ನಿರ್ದೇಶಕರು, ಪ್ರ.ವಿ.ಕೊಂ.ಸಂ.ಮಾ.ಸ.), ಸ್ಟ್ಯಾನಿ ಆಲ್ವಾರಿಸ್ (ಸಂಘಟಕರು, ಮಾಂಡ್ ಸೊಭಾಣ್), ನವೀನ್ ಲೋಬೊ (ಉಪಾಧ್ಯಕ್ಷರು, ಮಾಂಡ್ ಸೊಭಾಣ್), ರೊನಾಲ್ಡ್ ಕ್ರಾಸ್ತಾ (ಕಾರ್ಯದರ್ಶಿ, ಮಾಂಡ್ ಸೊಭಾಣ್) ಉಪಸ್ಥಿತರಿದ್ದರು.


