24.5 C
Karnataka
Thursday, April 30, 2026

ಕಬಕ – ಪುತ್ತೂರು ರೈಲು ನಿಲ್ದಾಣ ಸುಸಜ್ಜಿತ ಶೆಲ್ಟರ್ ನಿರ್ಮಾಣಕ್ಕೆ 2.91 ಕೋಟಿ ರೂ. ಮಂಜೂರು: ಸಂಸದ ಕ್ಯಾ. ಚೌಟ

ಮಂಗಳೂರು: ಕಬಕ – ಪುತ್ತೂರು ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಮೂಲಸೌಕರ್ಯ ಒದಗಿಸಲು 2.91 ಕೋಟಿ ರೂ. ಮೊತ್ತದ ಅಭಿವೃದ್ದಿ ಕಾಮಗಾರಿ ಯೋಜನೆಗೆ ಮಂಜೂರಾತಿ ದೊರೆತಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.

ಈ ಯೋಜನೆಯಡಿ ಕಬಕ ಪುತ್ತೂರು ನಿಲ್ದಾಣದ ಪ್ಲಾಟ್‌ಫಾರ್ಮ್ ನಂ. 1ರಲ್ಲಿ 2.91ಕೋಟಿ ರೂ. ವೆಚ್ಚದಲ್ಲಿ ಬೃಹತ್ ಶೆಲ್ಟರ್ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕಿದೆ. ಪ್ರಸ್ತುತ ಈ ನಿಲ್ದಾಣದಲ್ಲಿ ಪ್ರಯಾಣಿಕರ ತಂಗುದಾಣಕ್ಕೆ ಕೇವಲ 531 ಚ. ಮೀಟರ್ ಉದ್ದದ ಶೆಲ್ಟರ್ ಇದೆ. ಇದೀಗ ಈ ಯೋಜನೆಯಡಿ 3392 ಚ.ಮೀಟರ್ ವಿಸ್ತೀರ್ಣದ ಬೃಹತ್ ಶೆಲ್ಟರ್ ನಿರ್ಮಾಣಕ್ಕೆ ಅನುದಾನ ದೊರಕಿದೆ. ಅದರಂತೆಯೇ ಶೆಲ್ಟರ್ ನಿರ್ಮಾಣಕ್ಕೆ ಸ್ಥಳ ಗುರುತು ಮಾಡುವ ಪ್ರಕ್ರಿಯೆ ಮುಗಿದಿದ್ದು ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ. ಈ ಕಾಮಗಾರಿ ಪೂರ್ಣಗೊಂಡರೆ ಕಬಕ- ಪುತ್ತೂರು ರೈಲ್ವೇ ಸ್ಟೇಶನ್ ನಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಕ್ಯಾ. ಚೌಟ ಹೇಳಿದ್ದಾರೆ.

ಇದರೊಂದಿಗೆ ನಿಲ್ದಾಣದಲ್ಲಿ ಪ್ರಯಾಣಿಕರು ಸುಲಭವಾಗಿ ಓಡಾಡಲು ಅನುಕೂಲವಾಗುವಂತೆ ನಿಲ್ದಾಣದಲ್ಲಿ ಸದ್ಯ ಇರುವ ಮೇಲ್ಸೇತುವೆಗೆ (FOB) ಪ್ಲಾಟ್‌ಫಾರ್ಮ್ ನಂ. 2 ಮತ್ತು 2 ರ ಬಳಿ ಒಟ್ಟು 2 ಲಿಫ್ಟ್‌ ವ್ಯವಸ್ಥೆ ಅಳವಡಿಸುವ ಪ್ರಸ್ತಾವನೆ ಇದೆ. ಇದಕ್ಕೆ ಅಂದಾಜು 1.33 ಕೋಟಿ ರೂ. ವೆಚ್ಚ ನಿರೀಕ್ಷಿಸಲಾಗಿದ್ದು, ಪ್ರಸ್ತುತ ಈ ಯೋಜನೆಯು ರೈಲ್ವೆ ಕೇಂದ್ರ ಕಚೇರಿಯಲ್ಲಿ ಪರಿಶೀಲನೆ ಹಂತದಲ್ಲಿದೆ ಎಂದು ಸಂಸದರು ತಿಳಿಸಿದ್ದಾರೆ.

ಪತ್ರ ಬರೆದಿದ್ದ ಸಂಸದರು

ಕಬಕ ಪುತ್ತೂರು ರೈಲು ನಿಲ್ದಾಣದ ಅಭಿವೃದ್ದಿಯ ಅಗತ್ಯತೆಯನ್ನು ಮನಗಂಡಿದ್ದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು, 2024ರ ನವೆಂಬರ್ ನಲ್ಲಿ ನೈಋತ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಗೆ ಪತ್ರ ಬರೆದು ಶೆಲ್ಟರ್ ವಿಸ್ತರಿಸಲು ಕ್ರಮ ಕೈಗೊಳ್ಳುವಂತೆ ಕೋರಿದ್ದರು. ಈ ಭಾಗದ ಪ್ರಯಾಣಿಕರು ಬೇಸಿಗೆಯಲ್ಲಿ ತೀವ್ರ ಬಿಸಿಲಿನಿಂದ ಹಾಗೂ ಮಳೆಗಾಲದಲ್ಲಿ ನೆನೆಯುತ್ತಾ ರೈಲು ಹತ್ತಬೇಕಾದ ಕಷ್ಟಕರ ಪರಿಸ್ಥಿತಿಯನ್ನು ಅವರು ರೈಲ್ವೆ ಇಲಾಖೆ ಗಮನಕ್ಕೆ ತಂದಿದ್ದರು. ಪ್ರತಿಕೂಲ ವಾತಾವರಣದಿಂದ ಪ್ರಯಾಣಿಕರಿಗೆ ಎದುರಾಗುತ್ತಿದ್ದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಕ್ಯಾ. ಚೌಟ ಅವರು ಪ್ಲಾಟ್‌ಫಾರ್ಮ್ ಶೆಲ್ಟರ್ ವಿಸ್ತರಣೆ ಅಗತ್ಯತೆಯನ್ನು ಮನಗಂಡು ಈ ನಿಟ್ಟಿನಲ್ಲಿ ರೈಲ್ವೆ ಇಲಾಖೆಯು ಆದ್ಯತೆ ಮೇಲೆ ಅಗತ್ಯ ಅನುದಾನ ಬಿಡುಗಡೆಗೆ ಪ್ರಯತ್ನಿಸಿದ್ದರು. ಅದರಂತೆ ಇದೀಗ ರೈಲು ನಿಲ್ದಾಣದ ಅಭಿವೃದ್ದಿಗೆ ಅನುದಾನ ಮಂಜೂರು ಮಾಡಿರುವುದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ, ರೈಲ್ವೇ ಸಚಿವರಾದ ಅಶ್ವಿನಿ ವೈಷ್ಣವ್, ವಿ. ಸೋಮಣ್ಣ ಮತ್ತು ರೈಲ್ವೇ ಇಲಾಖೆಗೆ ಪ್ರಯಾಣಿಕರು ಹಾಗೂ ರೈಲ್ವೆ ಬಳಕೆದಾರರ ಸಂಘದ ಪರವಾಗಿ ಸಂಸದರು ಧನ್ಯವಾದ ಸಲ್ಲಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles