ಮ೦ಗಳೂರು: ಸಂತ ವಿನ್ಸೆಂಟ್ ಡಿ ಪೌಲ್ ಸೊಸೈಟಿ (SSVP) ಮಂಗಳೂರು ಕೇಂದ್ರ ಮಂಡಳಿ ಮತ್ತು ಬೆಂದೂರು ಕಾನ್ಫರೆನ್ಸ್‌ನ ಸಹಯೋಗದೊಂದಿಗೆ ಮಾರ್ಚ್ 22 ರಂದು ಬೆಂದೂರು ಚರ್ಚ್ ಸಭಾಂಗಣದಲ್ಲಿ ಸಂವಾದಾತ್ಮಕ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು.

ಬೆಳಿಗ್ಗೆ 10:30ಕ್ಕೆ ಆರಂಭವಾದ ಈ ಕಾರ್ಯಕ್ರಮದಲ್ಲಿ ಸುಮಾರು 100 ಮಂದಿ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು. ಮಂಗಳೂರು ಕೇಂದ್ರ ಮಂಡಳಿಯ ಆಧ್ಯಾತ್ಮಿಕ ಸಲಹೆಗಾರರಾದ ವಂದನೀಯ ಫಾದರ್ ಫ್ಲೇವಿಯನ್ ಲೋಬೊ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು ಮತ್ತು ಜ್ಯೊ ಕುವೆಲ್ಹೊ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು.
ವಿಚಾರ ಸಂಕಿರಣದ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿದ್ದ ಆವೆ ಮರಿಯಾ ಪಾಲಿಯೇಟಿವ್ ಕೇರ್ ಸೆಂಟರ್‌ನ ಡಾ. ಲವೀನಾ ನೊರೊನ್ಹಾ ಅವರು, “ನಾವು ನೀಡುವವರಲ್ಲ, ಬದಲಿಗೆ ಸೇವೆ ಮಾಡಲು ಆಶೀರ್ವದಿಸಲ್ಪಟ್ಟವರು” ಎಂಬ ವಿಷಯದ ಕುರಿತು ಮಾತನಾಡುತ್ತಾ, ಬಡವರನ್ನು ಘನತೆ ಮತ್ತು ಗೌರವದಿಂದ ನಡೆಸಿಕೊಳ್ಳುವ ಔಚಿತ್ಯವನ್ನು ವಿವರಿಸಿದರು.
ಅತಿಥಿ, ಖ್ಯಾತ ಉದ್ಯಮಿ ಜೋಸೆಫ್ ಮಿನೇಜಸ್ ಅವರು “ಗೌರವಯುತ ವೃದ್ಧಾಪ್ಯ: ಬದುಕು ಮತ್ತು ದಾನವನ್ನು ಕಲಿಯಿರಿ” ಎಂಬ ವಿಷಯದ ಬಗ್ಗೆ ಪ್ರಾಯೋಗಿಕ ಮಾಹಿತಿ ನೀಡಿದರು. ಬೆಂದೂರು ಕಾನ್ಫರೆನ್ಸ್‌ನ ಫ್ಲೇವಿ ಲೋಬೊ ಅವರು ವಂದನಾರ್ಪಣೆ ಮಾಡಿದರು .


