23.3 C
Karnataka
Saturday, May 30, 2026

ತಂಬಾಕಿನ ಸಹವಾಸ ಹಿತವಲ್ಲ- ಡಿ.ಎಚ್.ಒ

ಮಂಗಳೂರು: ತಂಬಾಕು, ಅದು ಯಾವುದೇ ರೂಪದಲ್ಲಿ ಇರಲಿ ಅವೆಲ್ಲವೂ ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕ; ಒಮ್ಮೆ ಅದನ್ನು ಸೇವಿಸಲು ಆರಂಭಿಸಿದರೆ ಅದು ನಮ್ಮನ್ನು, ನಮ್ಮ ಜೀವನವನ್ನು ಮುಕ್ತಾಯಗೊಳಿಸುವವರೆಗೂ ಕೊಂಡೊಯ್ಯುತ್ತದೆ. ಆದ್ದರಿಂದ ನಿಮ್ಮ ದೃಷ್ಟಿಯನ್ನು ಬದಲಾಯಿಸಿಕೊಂಡು ಯಾವುದೇ ಚಟಕ್ಕೆ ದಾಸರಾಗುವುದು ಬೇಡ ಎನಿಸಿ ದೃಢ ನಿರ್ಧಾರ ಮಾಡಿ ದೃಢ ಪ್ರಯತ್ನ ಮಾಡಿದರೆ ನಿಮ್ಮ ಜೀವನ ಖಂಡಿತಕ್ಕೂ ಸುಂದರವಾಗುತ್ತದೆ. ಆದ್ದರಿಂದ ತಂಬಾಕಿನ ಸಹವಾಸ ಬೇಡವೇ ಬೇಡ ಬಿಟ್ಟುಬಿಡಿ” ಎಂದು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಹೇಳಿದರು.
ಅವರು ಶನಿವಾರ ನಗರದ ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ “ವಿಶ್ವ ತಂಬಾಕು ನಿವಾರಣಾ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದರು.
ವೆನ್‍ಲಾಕ್ ಅಧೀಕ್ಷಕ ಡಾ.ಶಿವಪ್ರಕಾಶ್ ಮತನಾಡಿ, ವಿದ್ಯಾರ್ಥಿಗಳು ಕೆಲವೊಮ್ಮೆ ಪ್ರತಿ ಜಾಹೀರಾತನ್ನೂ ತೀವ್ರವಾಗಿ ವಿಶ್ಲೇಷಿಸಬೇಕಾಗುತ್ತದೆ. ಆಕರ್ಷಕವಾಗಿ ಪ್ರಸ್ತುತ ಪಡಿಸಿದ ಕೆಲವು ಜಾಹೀರಾತುಗಳು ತಂಬಾಕು-ಗುಟ್ಕಾಗಳನ್ನು ಹೆಚ್ಚು ಹೆಚ್ಚು ಬಳಸುವಂತೆ ಪ್ರೇರೇಪಿಸುತ್ತದೆ. ನೀವು ಕುತೂಹಲಕ್ಕಾಗಿಯೋ ಅಥವಾ ಅಲ್ಲಿರುವ ನಟ-ನಟಿಯರ ಮೇಲಿನ ಆಕರ್ಷಣೆಗೋ ಒಮ್ಮೆ ಇವುಗಳನ್ನು ಬಳಸಲು ಮನಸ್ಸು ಮಾಡಿದರೆ ನಿಮ್ಮ ಜೀವನ ದುರಂತದಲ್ಲಿ ಮುಕ್ತಾಯವಾಗುತ್ತದೆ. ಆದ್ದರಿಂದ ಶಿಕ್ಷಕರಾಗುವ ನೀವು ನಿಮ್ಮ ವಿವೇಚನಾ ಶಕ್ತಿಯನ್ನು ಸದಾ ಕಾಲ ಜಾಗೃತವಾಗಿ ಇಟ್ಟುಕೊಳ್ಳಬೇಕು” ಎಂದು ಹೇಳಿದರು. ಟಿ.ವಿ ಮತ್ತು ಇತರೆ ಮಾಧ್ಯಮಗಳಲ್ಲಿ ಬರುತ್ತಿರುವ ಹಲವಾರು ಜಾಹೀರಾತುಗಳನ್ನು ಉದಾಹರಣೆಯಾಗಿ ನೀಡಿ ಅವುಗಳ ಹಿಂದಿರುವ ದುರುದ್ದೇಶವನ್ನು ಸಭೆಗೆ ವಿವರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಪ್ರತಿನಿಧಿ ಗೋಪಾಲಕೃಷ್ಣ ಶೆಟ್ಟಿ ಮಾತನಾಡಿ, ತಂಬಾಕು-ಗುಟ್ಕಾ ರೀತಿಯ ಮಾದಕ ವಸ್ತುಗಳನ್ನು ಸೇವಿಸುವುದರ ಸಂಬಂಧ ಇರುವ ಕಾನೂನಿನ ಅಂಶಗಳನ್ನು ವಿಸ್ತಾರವಾಗಿ ತಿಳಿಸಿದರು. ಈ ಸಂಬಂಧದ ಕಾನೂನು ಎಷ್ಟು ಕಠಿಣವಾಗಿವೆ ಮತ್ತು ಇದರಿಂದ ತಪ್ಪಿಸಿಕೊಳ್ಳುವ ಏಕೈಕ ಮಾರ್ಗವೆಂದರೆ ಇವುಗಳಿಂದ ದೂರವಿರುವುದು ಎಂದು ತಿಳಿಸಿದರು.
ಬೀಡಿ-ಸಿಗರೇಟು ಮತ್ತು ತಂಬಾಕಿನ ಇತರೆ ಉತ್ಪನ್ನಗಳನ್ನು ತಯಾರಿಸುವ, ಮಾರುವ ಮತ್ತು ಸಾಗಾಣಿಕೆ ಮಾಡುವ ಸಾವಿರಾರು ಜನರು ಇದು ಒಂದು ಉದ್ಯೋಗ ಅಥವಾ ವ್ಯಾಪಾರ ಎಂದು ಇದರಲ್ಲಿ ಹತ್ತಾರು ವರ್ಷಗಳಿಂದ ಜೀವನವನ್ನು ಕಟ್ಟಿಕೊಂಡಿದ್ದಾರೆ. ಇದರಿಂದ ಇತರರ ಜೀವನ ಹಾಳಾಗುತ್ತಿದೆ ಎಂಬ ಘೋರ ಸತ್ಯ ಇವರಲ್ಲಿ ಬಹುತೇಕರಿಗೆ ಗೊತ್ತೇ ಇಲ್ಲ ಅಥವಾ ಈ ಸತ್ಯವನ್ನು ಹಲವಾರು ಸುಳ್ಳುಗಳನ್ನು ಹೇಳುವುದರ ಮೂಲಕ ಮುಚ್ಚಿಟ್ಟು ಸುಂದರ ರೂಪ ಕೊಡುತ್ತಿದ್ದಾರೆ. ಇಂತಹ ಉದ್ಯಮಗಳ ಬಗ್ಗೆ ಇಡೀ ಸಮಾಜ ಮರುಚಿಂತನೆ ಮಾಡುವ ಕಾಲ ಸನ್ನಿಹಿತವಾಗಿದೆ” ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರವಾಚಕ ಹಾಗೂ ಪ್ರಭಾರ ಪ್ರಾಂಶುಪಾಲರಾಗಿರುವ ಓ.ಆರ್.ಪ್ರಕಾಶ್ ಹೇಳಿದರು.
ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಹಾಗೂ ದಂತವೈದ್ಯೆ ಡಾ.ಆರತಿ ಕುಲಕರ್ಣಿ, ಇವರು ತಂಬಾಕಿನ ವಿವಿಧ ವಸ್ತುಗಳನ್ನು ಸೇವಿಸುವದರಿಂದ ಆಗುವ ವಿವಿಧ ದುಷ್ಪರಿಣಾಮಗಳ ಬಗ್ಗೆ ವಿವರವಾದ ಉಪನ್ಯಾಸವನ್ನು ನೀಡಿದರು. ಹಾಗೂ ಇದರ ನಿವಾರೋಣಾಪಯಗಳನ್ನು ಹಾಗೂ ಈ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಹಲವಾರು ಕ್ರಮಗಳನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಈ ಹಿಂದೆ ತಂಬಾಕಿನ ಚಟಕ್ಕೆ ದಾಸರಾಗಿದ್ದು ಈಗ ಆ ಚಟದಿಂದ ಮುಕ್ತರಾಗಿರುವ ವ್ಯಕ್ತಿ ಪ್ರನ್ನ ಕುಮಾರ್ ಎನ್ನುವವರು ತಮ್ಮ ಅನುಭವವನ್ನು ಸಭೆಯಲ್ಲಿ ಹಂಚಿಕೊಂಡರು. ದಕ್ಷಿಣ ಕನ್ನಡ ಜಿಲ್ಲೆಯ ಎಸ್.ಪಿ. ಕಚೇರಿಯ ಪಿ.ಎಸ್.ಐ. ನಿಧಿ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಎನ್ಫೋರ್‍ಮೆಂಟ್ ಅಧಿಕಾರಿಯಾಗಿರುವ ಡಾ.ದೀಪಾ ಪ್ರಭು.ಕೆ.ಪಿ. ಸ್ವಾಗತಿಸಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ ಉಳೆಪಾಡಿ ವಂದಿಸಿ, ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿನಿ ಆಶುರಾ ಬೇಗಂ ನಿರೂಪಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles