ಮ೦ಗಳೂರು: ಟ್ಯಾಂಕರ್ ಲಾರಿ ಹಾಗೂ ಡಸ್ಟರ್ ಕಾರು ಡಿಕ್ಕಿಯಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಡಿಕೇರಿ ಸಿದ್ದಾಪುರದ ಶೋಭಾ (47) ಅವರು ಮೃತಪಟ್ಟು ಇಬ್ಬರು ಗಾಯಗೊ೦ಡ ಘಟನೆ ಸಂಪಾಜೆ ಗ್ರಾಮದ ಕೊಡಪಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಸ೦ಭವಿಸಿದೆ.
ಕೊಡಪಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಡಿಕೇರಿಯಿಂದ ಸುಳ್ಯ ಮಾರ್ಗವಾಗಿ ಹೊರಟಿದ್ದ ಟ್ಯಾಂಕರ್ ಲಾರಿ ಮತ್ತು ಸುಳ್ಯದಿಂದ ಮಡಿಕೇರಿ ಮಾರ್ಗವಾಗಿ ಸಾಗುತ್ತಿದ್ದ ಡಸ್ಟರ್ ಕಾರ್ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದ್ದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಶೋಭಾ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಕಾರಿನಲ್ಲಿದ್ದ ಚಾಲಕ ದೇವಯ್ಯ(54) ಮತ್ತು ವನಜಾಕ್ಷಿ (44) ಅವರುಗಳೂ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆ ಬಗ್ಗೆ ಸುಳ್ಯ ಕೆವಿಜಿ ಆಸ್ಪತ್ರೆಯಿಂದ ವೈದ್ಯರು ಮಂಗಳೂರು ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


