ಮೂಡಬಿದರೆ: “ದೀಪವು ತನ್ನ ಬೆಳಕಿನಿಂದ ಕತ್ತಲೆಯನ್ನು ಹೋಗಲಾಡಿಸುವಂತೆಯೇ, ಶಿಕ್ಷಕರು ಸಹ ಜ್ಞಾನ, ಮೌಲ್ಯಗಳು ಮತ್ತು ವಿಚಾರಗಳ ಬೆಳಕನ್ನು ಹರಡುವ ಮೂಲಕ ಸಮಾಜವನ್ನು ಬೆಳಗಿಸುತ್ತಾರೆ” ಎಂದು ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.
ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗದ ವತಿಯಿಂದ ಆಯೋಜಿಸಿದ್ದ ಪ್ರೇರಣಾ ದಿವಸ ಹಾಗೂ ಅಧ್ಯಾಪಕ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. “ಶಿಕ್ಷಕರು ಜ್ಞಾನ, ಸಂಸ್ಕೃತಿ ಮತ್ತು ನೈತಿಕ ಮೌಲ್ಯಗಳನ್ನು ಸೃಷ್ಟಿಸುವ ಸಮಾಜದ ಆಧಾರಸ್ತಂಭಗಳು. ಜ್ಞಾನದ ಜೊತೆಗೆ, ಅವರು ವಿದ್ಯಾರ್ಥಿಗಳ ಜೀವನಕ್ಕೆ ನಿರ್ದೇಶನ, ದೃಷ್ಟಿ ಮತ್ತು ಉದ್ದೇಶವನ್ನು ಸಹ ಒದಗಿಸುತ್ತಾರೆ” ಎಂದರು.
“ಶಿಕ್ಷಕರ ಘನತೆಯನ್ನು ಕಾಪಾಡಿಕೊಳ್ಳುವಲ್ಲಿ, ನೀತಿ ನಿರೂಪಣೆಯಲ್ಲಿ ಭಾಗವಹಿಸುವಲ್ಲಿ ಮತ್ತು ಶಿಕ್ಷಣದ ಗುಣಮಟ್ಟವನ್ನು ಖಾತ್ರಿಪಡಿಸುವಲ್ಲಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘವು ನೀಡಿದ ಕೊಡುಗೆ ಅನುಕರಣೀಯವಾಗಿದೆ. ಈ ಸಂಘವು ವರ್ಷಗಳಿಂದ ಶಿಕ್ಷಣವನ್ನು ಕ್ರಿಯೆಯೊಂದಿಗೆ ಸಂಪರ್ಕಿಸುವ ಸ್ಫೂರ್ತಿಯನ್ನು ಶಿಕ್ಷಣ ಸಂಸ್ಥೆಗಳಲ್ಲಿ ತುಂಬುತ್ತಿರುವುದು ಪ್ರಶಂಶನೀಯ” ಎಂದು ಶ್ಲಾಘಿಸಿದರು.
“ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘದ ಸಂಸ್ಥಾಪನಾ ದಿನದ ಸಂದರ್ಭದಲ್ಲಿ, ಅತ್ಯುತ್ತಮ ಶಿಕ್ಷಕರಿಗೆ “ಅಧ್ಯಾಪಕ ಭೂಷಣ” ಪ್ರಶಸ್ತಿ ಮತ್ತು ಶಿಕ್ಷಣ ಕ್ಷೇತ್ರದ ಗಣ್ಯ ವ್ಯಕ್ತಿಗಳಿಗೆ “ಜೀವಮಾನ ಸಾಧನೆ ಪ್ರಶಸ್ತಿ” ನೀಡಿ ಗೌರವಿಸಿದ್ದಕ್ಕಾಗಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘದ ಎಲ್ಲಾ ಪದಾಧಿಕಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದರು. ”
ಸಮಾರಂಭದಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವಾ, ಪ್ರೇರಣಾ ದಿವಸ್ ಸ್ವಾಗತ ಸಮಿತಿಯ ಅಧ್ಯಕ್ಷ ವಿವೇಕ್ ಎಂ ಆಳ್ವ ಮುಂತಾದ ಗಣ್ಯರು ಉಪಸ್ಥಿತರಿದ್ದರು.


