ಮಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಶಿಶು ಅಭಿವೃದ್ದಿ ಯೋಜನೆ ಬೆಳ್ತಂಗಡಿ, ಬಂಟ್ವಾಳ, ಮಂಗಳೂರು ಗ್ರಾಮಾಂತರ, ಮಂಗಳೂರು ನಗರ, ಪುತ್ತೂರು, ಸುಳ್ಯ ಹಾಗೂ ವಿಟ್ಲ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಒಟ್ಟು 57 ಅಂಗನವಾಡಿ ಕಾರ್ಯಕರ್ತೆ ಹಾಗೂ 221 ಅಂಗನವಾಡಿ ಸಹಾಯಕಿಯರ ಗೌರವ ಸೇವೆಗಳ ಹುದ್ದೆಗೆ ಆನ್‍ಲೈನ್‍ನಲ್ಲಿ ಆಸಕ್ತ ಮಹಿಳಾ ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಅಕ್ಟೋಬರ್ 10 ರವರೆಗೆ ಕಾಲಾವಕಾಶ ನೀಡಲಾಗಿದೆ. ಇಲ್ಲಿಯವರೆಗೆ ಕಾರ್ಯಕರ್ತೆ ಹುದ್ದೆಗೆ 603 ಅರ್ಜಿಗಳಲ್ಲಿ 356 ಅಪೂರ್ಣ ಅರ್ಜಿಗಳು ಹಾಗೂ ಸಹಾಯಕಿ ಹುದ್ದೆಗೆ 492 ಅರ್ಜಿಗಳಲ್ಲಿ 199 ಅಪೂರ್ಣ ಅರ್ಜಿಗಳು ಸ್ವೀಕೃತವಾಗಿರುವುದರಿಂದ ಅರ್ಜಿಗಳು ಪೂರ್ಣಗೊಂಡಿರುವುದಿಲ್ಲ ಹಾಗೂ ಇವುಗಳು ಮುಂದೆ ಪರಿಶೀಲನೆಗೆ ಲಭ್ಯವಾಗಿರುವುದಿಲ್ಲ.
ಅಭ್ಯರ್ಥಿಗಳು ಇಲಾಖೆಯ ವೆಬ್‍ಸೈಟ್https:karnemakaone.kar.nic.in/abcd/ ನಲ್ಲಿ ಅರ್ಜಿ ಸಲ್ಲಿಸುವಾಗ ಸರ್ಕಾರದ ಆದೇಶದನ್ವಯ 3 ಹಂತಗಳಿದ್ದು, ಮೊದಲನೇ ಹಂತದಲ್ಲಿ ಆನ್‍ಲೈನ್‍ನಲ್ಲಿ ನೀಡಲಾದ ಅರ್ಜಿ ನಮೂನೆಯಲ್ಲಿ ಮಾಹಿತಿಯನ್ನು ಭರ್ತಿ ಮಾಡಬೇಕು. ಎರಡನೇ ಹಂತದಲ್ಲಿ ಸಹಿ, ಭಾವಚಿತ್ರವನ್ನು ಅಪ್‍ಲೋಡ್ ಮಾಡುವುದರೊಂದಿಗೆ ಈ-ಸೈನ್ (ಈ-ಹಸ್ತಾಕ್ಷರವನ್ನು) ಮಾಡಬೇಕು ಹಾಗೂ ಕೊನೆಯ ಹಂತದಲ್ಲಿ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಅಪ್‍ಲೋಡ್ ಮಾಡಬೇಕು. ಅಭ್ಯರ್ಥಿಗಳು ಯಾವುದೇ ಹಂತವನ್ನು ಪೂರ್ಣಗೊಳಿಸದೇ ಇದ್ದಲ್ಲಿ ಅಂತಹ ಅರ್ಜಿಗಳು ಪರಿಶೀಲನೆಗೆ ಲಭ್ಯವಾಗದೇ ಅಪೂರ್ಣ ಅರ್ಜಿ ಎಂದು ಪರಿಗಣಿಸಲಾಗುತ್ತದೆ. ಆದುದರಿಂದ ಅಪೂರ್ಣ ಅರ್ಜಿಯನ್ನು ಸಲ್ಲಿಸಿರುವ ಅಭ್ಯರ್ಥಿಗಳು ಆರ್ಜಿ ಭರ್ತಿ ಮಾಡುವಾಗ ತಮಗೆ ನೀಡಲಾಗಿರುವ ಅರ್ಜಿ ಸಂಖ್ಯೆ ಹಾಗೂ ತಮ್ಮ ಜನ್ಮ ದಿನಾಂಕದ ಮಾಹಿತಿಯನ್ನು ಪೋರ್ಟಲ್‍ನಲ್ಲಿ ನಮೂದಿಸಿ ಅರ್ಜಿ ಸಂಪೂರ್ಣವಾಗಿ ಸಲ್ಲಿಕೆಯಾಗಿರುವ ಕುರಿತು ಖಾತರಿಪಡಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗೆ ಶಿಶು ಅಬಿವೃದ್ದಿ ಯೋಜನಾಧಿಕಾರಿಗಳ ಕಚೇರಿ ಬೆಳ್ತಂಗಡಿ: 08256-295134, ಬಂಟ್ವಾಳ:08255-298562, ಮಂಗಳೂರು(ಗ್ರಾ):0824-2263199, ಮಂಗಳೂರು(ನ):0824-2959809, ಪುತ್ತೂರು: 08251-298788, ಸುಳ್ಯ:7795581349, ವಿಟ್ಲ:08255-238080 ಇವರನ್ನು ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


