31.5 C
Karnataka
Wednesday, May 13, 2026

ಯುವಪೀಳಿಗೆ ಮಾದಕ ವ್ಯಸನಕ್ಕೆ ಬಲಿಯಾಗದಂತೆ ಜಾಗೃತಿ ಮೂಡಿಸಲು:ಜಿಲ್ಲಾಧಿಕಾರಿ ಸೂಚನೆ

ಮಂಗಳೂರು: ಯುವಪೀಳಿಗೆ ಮಾದಕ ದ್ರವ್ಯಗಳಿಗೆ ಬಲಿಯಾಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ಚಿಕಿತ್ಸೆ ನೀಡುವುದರ ಜೊತೆಗೆ ಮಕ್ಕಳಿಗೆ ಮುಂದೆ ಸಂಭವಿಸುವ ಅನಾಹುತಗಳ ಬಗ್ಗೆ ಅರಿವು ಮೂಡಿಸಲು ಅಧಿಕಾರಿಗಳು ಹೆಚ್ಚಿನ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ಸೂಚಿಸಿದರು.
ಅವರು ಮಂಗಳವಾರ ನಗರದ ಪುರಭವನದಲ್ಲಿ ನಡೆದ ಜಿಲ್ಲಾ ಮಟ್ಟದ ನಾರ್ಕೋ ಕೋ ಆರ್ಡಿನೇಷನ್ ಸೆಂಟರ್ ಸÀಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಾಲಾ ಕಾಲೇಜುಗಳಲ್ಲಿ ಮಾದಕ ದ್ರವ್ಯಗಳ ಆಕರ್ಷಣೆಗೊಳಗಾಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ಇದರ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು. ಮಕ್ಕಳಲ್ಲಿ ಶಿಕ್ಷಣ, ಜಾಗೃತಿ, ಪ್ರೀತಿಯ ಕುಟುಂಬದ ವಾತಾವರಣ, ಕಠಿಣ ಕಾನೂನುಗಳು ಮತ್ತು ಯುವಜನರಲ್ಲಿ ಆರೋಗ್ಯಕರ ಜೀವನ ಶೈಲಿಯನ್ನು ಉತ್ತೇಜಿಸುವ ಮೂಲಕ ಮಾದಕ ವ್ಯಸನವನ್ನು ತಡೆಗಟ್ಟಬಹುದು ಎಂದರು.
ಅಪ್ರಾಪ್ತ ವಯಸ್ಸಿನಲ್ಲಿ ಮಾದಕ ವ್ಯಸನಕ್ಕೆ ತುತ್ತಾದಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರಿ ಮಕ್ಕಳು ಖಿನ್ನತೆಗೆ ಒಳಗಾಗುತ್ತಾರೆ. ಮಕ್ಕಳ ಚಲನವಲನಗಳ ಬಗ್ಗೆ ಪೋಷಕರು ಹಾಗೂ ಶಿಕ್ಷಕರು ನಿಗಾವಹಿಸಬೇಕು. ಇಲ್ಲವಾದಲ್ಲಿ ಕುಟುಂಬದ ಸ್ವಾಸ್ಥ್ಯ ಹಾಳಾಗಲು ಪ್ರಾರಂಭವಾಗುತ್ತದೆ. ಮಕ್ಕಳು ಸಾಮಾಜಿಕವಾಗಿ ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ಪೋಷಕರು, ಶಾಲಾ-ಕಾಲೇಜುಗಳು ಹಾಗೂ ಹಾಸ್ಟೆಲ್‍ಗಳಲ್ಲಿ ಮಕ್ಕಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಪೆÇಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮಾತನಾಡಿ, ಮಾದಕ ವ್ಯಸನವು ವ್ಯಕ್ತಿಯ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಜೀವನವನ್ನು ನಾಶಪಡಿಸುವ ಒಂದು ಗಂಭೀರ ಪಿಡುಗು. ಮಾದಕ ವಸ್ತುವಿನ ಚಟವು ಮೆದುಳಿನ ಮೇಲೆ ದೀರ್ಘಕಾಲದ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಮಕ್ಕಳಲ್ಲಿ ಅರಿವು ಮೂಡಿಸಬೇಕು. ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಎಲ್ಲಾ ಕಾಲೇಜುಗಳಲ್ಲಿ ಪ್ರತೀ ತಿಂಗಳಿಗೊಮ್ಮೆ ತಪಾಸಣೆ ನಡೆಸಿ ಕೌನ್ಸಿಲಿಂಗ್ ನಡೆಸುವುದರೊಂದಿಗೆ, ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ಚಿಕಿತ್ಸಾ ಕೇಂದ್ರಗಳು ಮತ್ತು ತಜ್ಞರ ಸಹಾಯದಿಂದ ಚಟದಿಂದ ಮುಕ್ತರಾಗಲು ಸಾಧ್ಯವಿದೆ ಎಂದರು.
ಸಭೆಯಲ್ಲಿ ಪೊಲೀಸ್ ಅಧೀಕ್ಷಕ ಡಾ. ಅರುಣ್.ಕೆ, ಉಪಪೋಲೀಸ್ ಆಯುಕ್ತ ಮಿಥುನ್ ಹೆಚ್.ಎನ್, ಹೆಚ್ಚುವರಿ ಪೋಲಿಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರೆಡ್ಡಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles