ಮ೦ಗಳೂರು: ಗಭಿ೯ಣಿ ಪತ್ನಿಯ ಕತ್ತು ಹಿಚುಕಿ ಸಾಯಿಸಿ ಪತಿ ಅತ್ಮಹತ್ಯೆಮಾಡಿಕೊ೦ಡ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ, ನಾವೂರು ಗ್ರಾಮದ ಬಡಗುಂಡಿ ಎಂಬಲ್ಲಿ ಬುಧವಾರ ರಾತ್ರಿ ಸ೦ಭವಿಸಿದೆ. ಸಜೀಪ ಮೂಡ ಮಿತ್ತಮಜಲ್ ನ ತಿಮ್ಮಪ್ಪ ಮೂಲ್ಯ (52) ಹಾಗೂ ಬಡಗುಂಡಿಯ ಜಯಂತಿ (45) ಮೃತಪಟ್ಟವರು.

ತಿಮ್ಮಪ್ಪ ಅವರ ಮನೆ ಮಿತ್ತಮಜಲಿನಲ್ಲಿದ್ದು, ಪತ್ನಿಯ ಮನೆ ಬಡಗುಂಡಿಯಲ್ಲಿದೆ. ಇವರಿಗೆ ಕಳೆದ 16 ವರ್ಷಗಳ ಹಿಂದೆ ಮದುವೆಯಾಗಿದ್ದು, ಮಕ್ಕಳಾಗಿರಲಿಲ್ಲ. ಪ್ರಸ್ತುತ ಪತ್ನಿ ಜಯಂತಿ ಗರ್ಭಿಣಿಯಾಗಿದ್ದು, ಜು.2ಕ್ಕೆ ಸೀಮಂತಕ್ಕೆ ದಿನ ನಿಗದಿಯಾಗಿತ್ತು ಎನ್ನಲಾಗಿದೆ.

ತಿಮ್ಮಪ್ಪ ಮೂಲ್ಯ ಅವರು ಬುಧವಾರ ರಾತ್ರಿ ಪತ್ನಿ ಜಯಂತಿಯೊ೦ದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದಿದ್ದರು . ಜಗಳ ವಿಕೋಪಕ್ಕೆ ತಿರುಗಿ ಜಯಂತಿ ಅವರಿಗೆ ಹಲ್ಲೆ ಮಾಡಿ, ಕತ್ತು ಹಿಚುಕಿ ಸಾಯಿಸಿದ್ದರು. ನಂತರ ತಿಮ್ಮಪ್ಪ ಕೂಡಾ ಅಡುಗೆ ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಜಯಂತಿ ಅವರ ಮೃತದೇಹ ಮಲಗುವ ಕೊಣೆಯ ಬೆಡ್ ನ ಕೆಳಗೆ ಪತ್ತೆಯಾಗಿತ್ತು. ತಿಮ್ಮಪ್ಪ ಮೂಲ್ಯ ಅಡುಗೆ ಕೋಣೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊ೦ಡಿದ್ದರು. ಬುಧವಾರ ರಾತ್ರಿ ಸ೦ಭವಿಸಿದ ಘಟನೆ ಗುರುವಾರ ಬೆಳಗ್ಗೆ ಘಟನೆ ಬೆಳಕಿಗೆ ಬ೦ದಿತ್ತು.
ತಿಮ್ಮಪ್ಪ ಮೂಲ್ಯ ಅವರಿಗೆ ಸಜೀಪ ಮೂಡದಲ್ಲಿ ಟೈಲರಿ೦ಗ್ ಅ೦ಗಡಿ ಇದ್ದು ಅಲ್ಲಿ೦ದಲೇ ನಾವೂರು ಗ್ರಾಮದ ಬಡಗುಂಡಿಗೆ ಬ೦ದು ಹೋಗುತ್ತಿದ್ದರು. ಇತ್ತೀಚೆಗೆ ಎಕ್ಟಿವಾ ಸ್ಕೂಟರ್ ಕೂಡಾ ಖರೀದಿಸಿದ್ದರು. ಜಯ೦ತಿ ಬೀಡಿ ಕಟ್ಟುತ್ತಿದ್ದರು. ಗ೦ಡ ಹೆ೦ಡತಿ ಅನ್ಯೋನ್ಯವಾಗಿದ್ದರು ಎನ್ನಲಾಗಿದೆ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.


