ಮ೦ಗಳೂರು: ಸಿಂಗಲ್ ಸೈಟ್ ನಕ್ಷೆ ಮತ್ತು ಪ್ರಾಪರ್ಟಿ ಕಾರ್ಡ್ ನೀಡಲು 43,500 ರೂ.- ಲಂಚ ಪಡೆದ ಯು.ಪಿ.ಓ.ಆರ್ ಕಛೇರಿಯ ಸರ್ವೆಯರ್ ಹಾಗೂ ಮಧ್ಯವರ್ತಿಯನ್ನು ಮಂಗಳೂರು ಲೋಕಾಯುಕ್ತ ಪೊಲೀಸರು ಕಾಯಾ೯ಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಸರ್ವೆಯರ್ ನಂದೀಶ್ ಹಾಗೂ ಮಧ್ಯವರ್ತಿ ದಿವಾಕರ್ ಬಿಜೈ ಲ೦ಚ ಸ್ವೀಕರಿಸಿದ ಆರೋಪಿಗಳು.

ನಂದೀಶ್
ಪಿರ್ಯಾದಿದಾರರ ತಾಯಿ ತನ್ನ ಹೆಸರಿನಲ್ಲಿರುವ ಕಂಕನಾಡಿ ಗ್ರಾಮದ ಮತ್ತು ಬಜಾಲ್ ಗ್ರಾಮದ ಜಮೀನಿನ ಸಿಂಗಲ್ ಸೈಟ್ ನಕ್ಷೆ ಮತ್ತು ಪ್ರಾಪರ್ಟಿ ಕಾರ್ಡ್ ಮಾಡಿಸಲು ಫೆಬ್ರವರಿಯಲ್ಲಿ ಮಂಗಳೂರು ಯು.ಪಿ.ಓ.ಆರ್ ಕಛೇರಿಗೆ ಅರ್ಜಿ ಸಲ್ಲಿಸಿದ್ದು, ಪಿರ್ಯಾದಿದಾರರ ತಾಯಿಗೆ ವಯಸ್ಸಾಗಿರುವುದರಿಂದ ಪಿರ್ಯಾದಿದಾರರು ಮಂಗಳೂರು ಯು.ಪಿ.ಓ.ಆರ್ ಕಛೇರಿಗೆ ಹೋಗಿ ಕಡತದ ಬಗ್ಗೆ ವಿಚಾರಿಸಿರುತ್ತಾರೆ. ಅಲ್ಲಿನ ಸರ್ವೆಯರ್ ನಂದೀಶ್ ರವರು ಏಪ್ರಿಲ್ ನಲ್ಲಿ ಸರ್ವೆ ನಡೆಸಿ ನಂತರ ರೂ 6500/- ಲಂಚದ ಹಣವನ್ನು ಸ್ವೀಕರಿಸಿದ್ದು ಹಾಗೂ ರೂ 20,000/- ಲಂಚದ ಹಣವನ್ನು ಮಧ್ಯವರ್ತಿ ದಿವಾಕರ್, ಬಿಜೈ ಮೂಲಕ ಪಡೆದುಕೊಂಡಿರುತ್ತಾರೆ.

ದಿವಾಕರ್ ಬಿಜೈ
ನಂತರ ಸರ್ವೆಯರ್ ನಂದೀಶ್ ಬಜಾಲ್ ಮತ್ತು ಕಂಕನಾಡಿ ಗ್ರಾಮದ ಎರಡೂ ಸ್ಥಳಗಳ ಸಿಂಗಲ್ ಸೈಟ್ ನಕ್ಷೆ ಮತ್ತು ಪ್ರಾಪರ್ಟಿ ಕಾರ್ಡ್ ನೀಡಲು ಹೆಚ್ಚುವರಿಯಾಗಿ ರೂ 18,000/- ಲಂಚದ ಹಣವನ್ನು ನೀಡುವಂತೆ ಪಿರ್ಯಾದಿದಾರರಿಗೆ ಒತ್ತಾಯಿಸಿರುತ್ತಾರೆ. ಈ ಬಗ್ಗೆ ಪಿರ್ಯಾದಿದಾರರು ಸಾಕ್ಷಿ ಪುರಾವೆಗಳೊಂದಿಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಸರ್ವೆಯರ್ ನಂದೀಶ್ ಮತ್ತು ದಿವಾಕರ್, ವಿರುದ್ಧ ಪ್ರಕರಣ ದಾಖಲಾಗಿರುತ್ತದೆ.
ಮುಂದುವರಿದು ಸರ್ವೆಯರ್ ನಂದೀಶ್ ಜೂನ್ ನಲ್ಲಿ ಪಿರ್ಯಾದಿದಾರರಿಂದ ರೂ 15,000/- ಲಂಚದ ಹಣವನ್ನು ದಿವಾಕರ್ ಮೂಲಕ ಪಡೆದುಕೊಂಡಿರುತ್ತಾರೆ. ಸರ್ವೆಯರ್ ನಂದೀಶ್ ಸಿಂಗಲ್ ಸೈಟ್ ನಕ್ಷೆ ಮತ್ತು ಪ್ರಾಪರ್ಟಿ ಕಾರ್ಡ್ ನೀಡಲು ರೂ 41,500/- ಲಂಚದ ಹಣವನ್ನು ಪಡೆದುಕೊಂಡಿದ್ದರು. ಬಳಿಕ ಬುಧವಾರ ಪಿರ್ಯಾದಿದಾರರಿಂದ ಹೆಚ್ಚುವರಿಯಾಗಿ ರೂ 2000/- (ಎರಡು ಸಾವಿರ) ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುತ್ತಾರೆ. ಸರ್ವೆಯರ್ ನಂದೀಶ್ ಪಿರ್ಯಾದಿದಾರರಿಂದ ಇಲ್ಲಿಯವರೆಗೆ ಒಟ್ಟು ರೂ 43,500/- ಲಂಚದ ಹಣವನ್ನು ಪಡೆದುಕೊಂಡಿರುತ್ತಾರೆ. ಸರ್ವೆಯರ್ ನಂದೀಶ್ ಮತ್ತು ಮದ್ಯವರ್ತಿ ದಿವಾಕರ್, ಬಿಜೈ, ಅವರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.
ಈ ಕಾರ್ಯಾಚರಣೆಯಲ್ಲಿ ಕುಮಾರಚಂದ್ರ, ಪೊಲೀಸ್ ಅಧೀಕ್ಷಕರು (ಪ್ರಭಾರ), ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗ ಅವರ ಮಾರ್ಗದರ್ಶನದಲ್ಲಿ, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಡಾ. ಗಾನ ಪಿ ಕುಮಾರ್, ಸುರೇಶ್ ಕುಮಾರ್.ಪಿ, ಪೊಲೀಸ್ ನಿರೀಕ್ಷಕರಾದ ಭಾರತಿ ಜಿ, ಚಂದ್ರಶೇಖರ್ ಕೆ.ಎನ್ ರವರು ಮಂಗಳೂರು ಲೋಕಾಯುಕ್ತ ಸಿಬ್ಬಂದಿಗಳ ಜೊತೆ ಟ್ರಾಪ್ ಕಾರ್ಯಾಚರಣೆ ಕೈಗೊಂಡಿರುತ್ತಾರೆ.


