24.8 C
Karnataka
Thursday, April 30, 2026

ಸೆ. 22ರಿಂದ ಮಂಗಳೂರು ದಸರಾ ವೈಭವ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಸೆ.22ರಿ೦ದ ಅಕ್ಟೋಬರ್ 3ರವರೆಗೆ ಮಂಗಳೂರು ದಸರಾ ಮಹೋತ್ಸವ ಜರುಗಲಿದೆ.

ಸೆ.22ರಂದು ಬೆಳಗ್ಗೆ 8.30ಕ್ಕೆ ಗುರು ಪ್ರಾರ್ಥನೆಯೊಂದಿಗೆ ಪುಣ್ಯಾಹ ಹೋಮ ನವಕಲಶಾಭಿಷೇಕ ನಡೆದು ಪೂರ್ವಾಹ್ನ 12ಗಂಟೆಗೆ ನವದುರ್ಗೆಯರು, ಮಹಾಗಣಪತಿ ಹಾಗೂ ಶ್ರೀ ಶಾರದಾ ಮಾತೆಯ ಪ್ರತಿಷ್ಠಾಪನೆಯೊಂದಿಗೆ ಪ್ರಾರಂಭಗೊಂಡು ಅಕ್ಟೋಬರ್ 3ರ ತನಕ ಕೇಂದ್ರದ ಮಾಜಿ ಸಚಿವರು, ಕ್ಷೇತ್ರದ ಅಭಿವೃದ್ಧಿಯ ರುವಾರಿ ಬಿ.ಜನಾರ್ದನ ಪೂಜಾರಿಯವರ ಮಾರ್ಗದರ್ಶನದಲ್ಲಿ ಮಂಗಳೂರು ದಸರಾ (ನವರಾತ್ರಿ ಮಹೋತ್ಸವ) ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ವಿಜೃಂಭಣೆಯಿಂದ ಜರುಗಲಿದೆ.

ಸೆ.22ರಂದು ಬೆಳಗ್ಗೆ 11.30ಕ್ಕೆ ಧಾರ್ಮಿಕ ಕಾರ್ಯಕ್ರಮಗಳು ಮಂಗಳೂರು ರಾಮಕೃಷ್ಣ ಮಿಶನ್‌ನ ಅಧ್ಯಕ್ಷರಾದ ಜಿತಕಾಮಾನಂದಜಿ ಮಹಾರಾಜ್, ಮಂಗಳೂರು ಬ್ರಹ್ಮಕುಮಾರೀಸ್ ಸಂಸ್ಥೆ ಮುಖ್ಯಸ್ಥೆ ಬಹ್ಮಕುಮಾರಿ ವಿಶ್ವೇಶ್ವರಿ ಜೀ  ಅವರ ದಿವ್ಯಹಸ್ತದಿಂದ ಬಿ.ಜನಾರ್ದನ ಪೂಜಾರಿಯವರ ಸಮ್ಮುಖದಲ್ಲಿ ಚಾಲನೆಗೊಳ್ಳಲಿದೆ.

ದೇವಸ್ಥಾನದ ಓಳಾಂಗಣದ ಮೇಲ್ಛಾವಣಿ ಜಿಲ್ಲೆಯಲ್ಲಿಯೇ ಪ್ರಥಮ ಎಂಬಂತೆ ಹೊಸಮಾದರಿಯಲ್ಲಿ ನವೀಕರಣಗೊಂಡಿದ್ದು, ಸೆ.21ರಂದು ಸಂಜೆ ಕೇತ್ರದ ನವ ನಿರ್ಮಾಣದ ರೂವಾರಿ, ಕೇಂದ್ರದ ಮಾಜಿ ಸಚಿವರಾದ ಜನಾರ್ದನ ಪೂಜಾರಿಯವರು ಉದ್ಘಾಟಿಸಲಿದ್ದಾರೆ.

ಸೆ.22ರಂದು ಸಾಂಸ್ಕೃತಿಕ ಕಾರ್ಯಕ್ರಮವನ್ನು ಎನ್‌ಎಂಪಿಎ ಚೇರ್ಮನ್ ಡಾ.ವೆಂಕಟರಮಣ್ ಅಕ್ಕಚ್ಚುರಾಜು, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮಂಗಳೂರು ವಲಯ ಮುಖ್ಯಸ್ಥ ರಾಜೇಂದರ್ ಕುಮಾರ್ ಉದ್ಘಾಟಿಸಲಿದ್ದಾರೆ. ಸಮಾಜಮುಖಿ ಸೇವೆ ಸಲ್ಲಿಸುತ್ತಿರುವ ಸಾನಿಧ್ಯ ವಿಶೇಷ ಶಾಲೆ ಮಂಗಳೂರು, ವೈಟ್‌ಡೌಸ್ ಮಂಗಳೂರು, ಎಂ ಫ್ರೆಂಡ್ಸ್ ಚಾರಿಟೆಬಲ್ ಟ್ರಸ್ಟ್‌ನ ಸೇವೆಯನ್ನು ಗುರುತಿಸಿ ಈ ಸಂದರ್ಭ  ಪುರಸ್ಕರಿಸಲಾಗುವುದು. ಭರತನಾಟ್ಯದಲ್ಲಿ ಗೊಲ್ಡನ್‌ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಾದನೆಗೈದ ರೆಮೋನಾ, ದೀಕ್ಷಾ ಸುವರ್ಣ ಅವರನ್ನು ಗೌರವಿಸಲಾಗುವುದು.ಸೆ.25ರಂದು ಸಂಜೆ 6ಗಂಟೆಗೆ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ಲೋಕಸಭೆ ಸದಸ್ಯ, ಎಐಸಿಸಿಯ ಕೆ.ಸಿ.ವೇಣುಗೋಪಾಲ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹಾಗೂ ಜನಪ್ರತಿನಿಧಿಗಳು, ಗಣ್ಯರ ಉಪಸ್ಥಿತಿಯಲ್ಲಿ ಜನಾರ್ದನ ಪೂಜಾರಿಯವರ ಅಧ್ಯಕ್ಷತೆಯಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ ಸಿಗಲಿದೆ.
ಸೆ.28ರಂದು ಬೆಳಗ್ಗೆ 9ಕ್ಕೆ ಸಾಮೂಹಿಕ ಚಂಡಿಕಾ ಹೋಮ ನೆರವೇರಲಿದೆ.

ಸಾಂಸ್ಕೃತಿಕ ಕಲಾ ವೈಭವ
ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮ  ನೀಡುವ ತಂಡಗಳನ್ನು ಆಯ್ಕೆ ಸಮಿತಿ ಮೂಲಕ ಆಯ್ಕೆ ಮಾಡಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದಿರುವ ಮಂಗಳೂರು ದಸರಾದ ಸಾಂಸ್ಕೃತಿಕ ವೇದಿಕೆಯಲ್ಲಿ ಕಲಾಪ್ರದರ್ಶನ ನೀಡಲಿದ್ದಾರೆ. 40 ತಂಡಗಳ ಸುಮಾರು 1500ಕ್ಕೂ ಅಧಿಕ ಕಲಾವಿದರಿಗೆ ಕಲಾಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೇರೆ ಬೇರೆ ಕಲಾಸಕ್ತ ಮನಸ್ಸುಗಳಿಗಾಗಿ ಭರತನಾಟ್ಯ, ಜಾನಪದ ಸಂಭ್ರಮ, ಭಕ್ತಿ ಪ್ರಧಾನ ನೃತ್ಯ ರೂಪಕ, ಯಕ್ಷಗಾನ, ಗಾನ ನಾಟ್ಯ ವೈಭವ, ತಾಳಮದ್ದಳೆ, ಹರಿಕಥೆ, ಸಂಗೀತ ಪರಿಕರಗಳ ಜುಗಲ್‌ಬಂಧಿ, ಸಪ್ತ ವೀಣಾವಾದನ, ಜಾದೂ ಪ್ರದರ್ಶನ, ನವರಸಗಳ ಸಮ್ಮಿಲನ ಈ ಬಾರಿಯ ವಿಶೇಷತೆ.

ಸಾಹಿತ್ಯ ವೈಭವ
ಸೆ.23ರಂದು ಸಂಜೆ 4ರಿಂದ 6ರವರೆಗೆ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಸಹಯೋಗದದಲ್ಲಿ ಬಹುಭಾಷಾ ಕವಿಗೋಷ್ಠಿ ಆಯೋಜಿಸಲಾಗಿದೆ. ಹಂಪಿ ವಿವಿ ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪ ಗೌಡ ಅಧ್ಯಕ್ಷತೆಯಲ್ಲಿ ತುಳು ಭಾಷಾ ಕವಿಗೋಷ್ಠಿ ಜರಗಲಿದೆ. ಸೆ.24ರಂದು ಮಕ್ಕಳಿಗಾಗಿ ಮುುದ್ದು ಶಾರದೆ ಸ್ಪರ್ಧೆ, 26ರಂದು ಮಿಸ್ಟರ್ ಮಂಗಳೂರು ದಸರಾ ಕ್ಲಾಸಿಕ್  ರಾಜ್ಯ ಮಟ್ಟದ ದೇಹಧ್ಯಾಡ್ಯ ಸ್ಪರ್ಧೆ , ದಸರಾ ಅಂಗವಾಗಿ 3ನೇ ವರ್ಷದ ದಸರಾ ಮ್ಯಾರಥಾನ್ 28ರಂದು ಬೆಳಗ್ಗೆ 4 ಗಂಟೆಯಿಂದ ನಡೆಯಲಿದೆ., 21ಕೆ ರನ್, 10ಕೆ ರನ್, 5ಕೆ ರನ್, 2ಕೆ ಸ್ಯಾರಿ ರನ್ ಆಯೋಜಿಸಲಾಗಿದೆ.  ಒಟ್ಟು 1,00,000ರೂ. ಬಹುಮಾನ ಘೋಷಿಸಲಾಗಿದೆ. ಸೆ.28ರಂದು ಮಕ್ಕಳ ದಸರಾ ಪರಿಕಲ್ಪನೆಯಡಿ ಮಕ್ಕಳಿಗೋಸ್ಕರ ಕಿನ್ನಿಪಿಲಿ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಸಂಗೀತ ಸ್ಪರ್ಧೆಯನ್ನು ಆಕರ್ಷಕ ಬಹುಮಾನದೊಂದಿಗೆ ಆಯೋಜಿಸಲಾಗಿದೆ.

ಅ.2ರಂದು ಭವ್ಯ ಶೋಭಾಯಾತ್ರೆ
ಅಕ್ಟೋಬರ್ 2ರಂದು ಬಿ.ಜನಾರ್ದನ ಪೂಜಾರಿಯವರ ನೇತೃತ್ವವದಲ್ಲಿ ಸಂಜೆ 4ರಿಂದ ನವದುರ್ಗೆಯರು, ಗಣಪತಿ ಮತ್ತು ಶಾರದಾ ಮಾತೆಯ ಭವ್ಯ ಶೋಭಾಯಾತ್ರೆ ನಡೆಯಲಿದೆ. ಶೋಭಾಯಾತ್ರೆಯು ಕ್ಷೇತ್ರದಿಂದ ಹೊರಟು ಕಂಬ್ಳರಸ್ತೆ, ಮಣ್ಣಗುಡ್ಡ ಮಾರ್ಗವಾಗಿ ಬ್ರಹ್ಮಶ್ರೀ ನಾರಾಯಣಗುರು ವೃತ್ತ, ಲಾಲ್‌ಬಾಗ್, ಬಲ್ಲಾಳ್‌ಭಾಗ್. ಪಿವಿಎಸ್ ಸರ್ಕಲ್, ನವಭಾರತ ಸರ್ಕಲ್, ಕೆ.ಎಸ್. ರಾವ್ ರಸ್ತೆ, ಹಂಪನಕಟ್ಟೆ, ವಿ.ವಿ ಕಾಲೇಜು ವೃತ್ತದಿಂದ ಬಲಕ್ಕೆ ತಿರುಗಿ, ಗಣಪತಿ ಹೈಸ್ಕೂಲ್ ಮಾರ್ಗವಾಗಿ ಶ್ರೀ ವೆಂಕಟರಮಣ ದೇವಸ್ಥಾನ ಮುಂಭಾಗದಿಂದ ಕಾರ್‌ಸ್ಟ್ರೀಟ್, ಚಿತ್ರಾ ಟಾಕೀಸ್ ಅಳಕೆಯಾಗಿ ಶ್ರೀಕ್ಷೇತ್ರಕ್ಕೆ ಬರಲಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles