ಮ೦ಗಳೂರು: ಬಾಲ ಯೇಸುವಿನ ವಾರ್ಷಿಕ ಮಹೋತ್ಸವದ ಸಿದ್ಧತೆಯ ನೋವೆನಾದ ಮೂರನೇ ದಿನದಂದು, ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. , ಹೆಚ್ಚಿನ ಸಂಖ್ಯೆಯ ಭಕ್ತಾದಿಗಳು ಪ್ರಾರ್ಥನೆ ಮತ್ತು ಚಿಂತನೆಯಲ್ಲಿ ಪಾಲ್ಗೊಂಡಿದ್ದರು.

ದಿನದ ಕಾರ್ಯಕ್ರಮಗಳು ಬೆಳಿಗ್ಗೆ 6 ಗಂಟೆಗೆ ಉಡುಪಿ ಧರ್ಮಪ್ರಾಂತ್ಯದ ಪತ್ರಿಕೆ ‘ಉಜ್ವಾಡ್’ನ ಸಂಪಾದಕರಾದ ವಂ| ಆಲ್ವಿನ್ ಸಿಕ್ವೇರಾ, ಒಸಿಡಿ ಅವರಿಂದ ಬಲಿಪೂಜೆಯೊಂದಿಗೆ ಪ್ರಾರಂಭವಾಯಿತು. ಬೆಳಿಗ್ಗೆ 7:30ರ ಪ್ರಾರ್ಥನಾ ವಿಧಿಯನ್ನು ರಾಮನಗರ-ಲೋಂಡಾದ ವಂ| ಮೋವಿನ್ ಪಿರೇರಾ ನೆರವೇರಿಸಿದರು. ನಂತರ 9ಗಂಟೆಯ ಬಲಿಪೂಜೆಯನ್ನು ಫಾರ್ಲಾ ಚರ್ಚಿನ ಧರ್ಮಗುರುಗಳಾದ ವಂ| ಅರುಣ್ ಮಾರ್ಕ್ ಅವರು ಅರ್ಪಿಸಿದರು. ಬೆಳಿಗ್ಗೆ 10:30ರ ಪ್ರಮುಖ ಬಲಿಪೂಜೆಯನ್ನು ಮೂಡುಬೆಳ್ಳೆಯ ದಿವ್ಯಧಾಮ್ ಸೆಮಿನರಿಯ ಅಧ್ಯಾತ್ಮ ನಿರ್ದೇಶಕರಾದ ವಂ| ಬೊನಿಫಾಸ್ ಪಿಂಟೊ ಅವರು ನೆರವೇರಿಸಿ, ಆರಾಧನೆ ಮತ್ತು ಪ್ರಾರ್ಥನೆಯನ್ನು ಮುನ್ನಡೆಸಿದರು.
ಸಂಜೆ 5 ಗಂಟೆಗೆ ಇಂಗ್ಲಿಷ್ ಭಾಷೆಯ ಬಲಿಪೂಜೆಯನ್ನು ಸೈಂಟ್ ಅಲೋಶಿಯಸ್ ಕಾಲೇಜಿನ ರೆಕ್ಟರ್ ವಂ| ಮೆಲ್ವಿನ್ ಪಿಂಟೊ ನೆರವೇರಿಸಿದರು. ಸಂಜೆ 6 ಗಂಟೆಯ ಬಲಿಪೂಜೆಯನ್ನು ‘ನಮನ್ ಬಾಳೊಕ್ ಜೆಜು’ ಪತ್ರಿಕೆಯ ಮಾಜಿ ಸಂಪಾದಕರಾದ ವಂ| ಜೋಸಿ ಸಿದ್ದಕಟ್ಟೆ ಅರ್ಪಿಸಿದರು. ದಿನದ ಕೊನೆಯ ಬಲಿಪೂಜೆಯನ್ನು ರಾತ್ರಿ 7:45ಕ್ಕೆ ಕನ್ನಡ ಭಾಷೆಯಲ್ಲಿ ಬೇಲೂರು ಸೈಂಟ್ ಮೈಕಲ್ ಚರ್ಚ್‌ನ ಧರ್ಮಗುರುಗಳಾದ ವಂ| ಪ್ರಸನ್ನ ಕುಮಾರ್, ಒಸಿಡಿ ನೆರವೇರಿಸಿದರು.
ಪುಣ್ಯಕ್ಷೇತ್ರದ ಸಾಮಾಜಿಕ ಸೇವೆಯ ಭಾಗವಾಗಿ ಅಂದು ಉಚಿತ ಕಣ್ಣಿನ ತಪಾಸಣೆ ಮತ್ತು ಕನ್ನಡಕ ವಿತರಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಬಾಲ ಯೇಸುವಿನ ಪುಣ್ಯಕ್ಷೇತ್ರ, ಕಾರ್ಮೆಲ್ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಡಾ. ಅಗರ್ವಾಲ್ ಕಣ್ಣಿನ ಆಸ್ಪತ್ರೆ ಮತ್ತು ವಿಷನ್ ವರ್ಲ್ಡ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿತ್ತು.


