ಮ೦ಗಳೂರು: ದ.ಕ.ಜಿಲ್ಲೆ ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕ್ಷೇತ್ರ. ನಮ್ಮಲ್ಲಿ ಅನೇಕರು ಶಿಕ್ಷಣ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅದರಲ್ಲೂ ವಿದ್ವತ್ ಶಿಕ್ಷಣ ಸಂಸ್ಥೆ ಸಮಾಜಮುಖಿಯಾಗಿ ಚಿಂತಿಸಿ, ಸಮಾಜದ ವಿದ್ಯಾರ್ಥಿಗಳಿಗಾಗಿ 54 ಕ್ಕೂ ಅಧಿಕ ಸ್ಪರ್ಧಾತ್ಮಕ ಪರೀಕ್ಷೆಗಳಿವೆ, ಅದಕ್ಕೆ ಹೇಗೆ ತಯಾರಿ ನಡೆಸಬೇಕೆಂಬ ನೆಲೆಯಲ್ಲಿ ಜಿಲ್ಲೆಯಲ್ಲೇ ಮೊದಲ ಬಾರಿಗೆ ಉಚಿತವಾಗಿ ಮಾರ್ಗದರ್ಶನ ನೀಡಲು ಮುಂದಾಗಿರುವ ಏಕೈಕ ಕಾಲೇಜೆಂದರೆ ಅದು ವಿದ್ವತ್ ಕಾಲೇಜು ಎಂದು ಹೇಳಲು ಹೆಮ್ಮೆಯಾಗುತ್ತಿದೆ ಎಂದು ಹಿರಿಯ ಪತ್ರಕರ್ತ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಹೇಳಿದರು.
ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನಿಂದ ಸೆ.8 ರಂದು ಕಾಲೇಜಿನ ಆವರಣದಲ್ಲಿ ನಡೆದ Walk-in to VIDVATH, A step into success ಎಂಬ ಉಚಿತ ಶೈಕ್ಷಣಿಕ ಸಮಾಲೋಚನೆ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ವಾಕ್ ಇನ್ ಟು ವಿದ್ವತ್, ಎ ಸ್ಟೆಪ್ ಇನ್ ಟು ಸಕ್ಸಸ್ ನಾಮಫಲಕ ಅನಾವರಣ ಮಾಡಿದ ಪದ್ಮಶ್ರೀ ಹರೇಕಳ ಹಾಜಬ್ಬ ಅವರು ಮಾತನಾಡಿ ಶಿಕ್ಷಣ ಪಡೆದ ಸಂಸ್ಥೆಗೆ ಕೀರ್ತಿ ತನ್ನಿ ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ ವಿದ್ವತ್ ಕಾಲೇಜಿನ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ, ಭಾರತೀಯ ಮೂಲವಾದ ಸಂಸ್ಕೃತ ಪದದಿಂದ ವಿದ್ವತ್ ಎಂಬ ಹೆಸರು ಇರಿಸಿದ್ದೇವೆ. ಇಂದು ಪೋಷಕರಲ್ಲಿ ತಮ್ಮ ಮಕ್ಕಳು ಏನು ಮಾಡಬೇಕೆಂಬ ಬಗ್ಗೆ ದೂರದೃಷ್ಟಿ ಆಲೋಚನೆಗಳಿಲ್ಲದೆ ಪರಿತಪಿಸುತ್ತಾರೆ. ಈ ನಿಟ್ಟಿನಲ್ಲಿ ವಿದ್ವತ್ ಕಾಲೇಜು ವಿದ್ವಾರ್ಥಿಗಳ ವಿವೇಚನೆಗಾಗಿ ಉಚಿತ ಶೈಕ್ಷಣಿಕ ಸಮಾಲೋಚನೆ ಹಾಗೂ ವೃತ್ತಿ ಮಾರ್ಗದರ್ಶನ ಪರಿಚಯಿಸಿದ್ದೇವೆ.ಎಂದು ತಿಳಿಸಿದರು.
ಕಾಲೇಜಿನ ಭೌತಶಾಸ್ತ್ರ ಪ್ರಯೋಗಾಲಯ ಉದ್ಘಾಟಿಸಿದ ಬೆಳ್ತಂಗಡಿ ಸಿರೋ ಮಲಬಾರ್ ಕ್ಯಾಥೊಲಿಕ್ ಧರ್ಮಪ್ರಾಂತ್ಯದ ಪ್ರಧಾನ ಗುರುಗಳಾದ ಫಾ.ಜೋಸೆಫ್ ವಲಿಯಪರಂಬಿಲ್ ಅವರು ಮಾತನಾಡಿ, ಇಲ್ಲಿ ಯುವ ಪೀಳಿಗೆ ಬೆರೆತುಕೊಳ್ಳಲು ಉತ್ತಮ ಅವಕಾಶವನ್ನು ವಿದ್ವತ್ ಕಾಲೇಜು ಪರಿಚಯಿಸಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಅವರ ಭವಿಷ್ಯ ರೂಪಿಸುವ ದೂರದೃಷ್ಟಿ ಚಿಂತನೆಗೆ ಕಾಲೇಜನ್ನು ಅಭಿನಂದಿಸುತ್ತೇನೆ.ಎ೦ದರು.
ರಸಾಯನಶಾಸ್ತ್ರ ಪ್ರಯೋಗಾಲಯ ತಹಶೀಲ್ದಾರ್ ಪೃಥ್ವಿ ಸಾನಿಕಮ್ ಉದ್ಘಾಟಿಸಿದರು.ಜೀವಶಾಸ್ತ್ರ ಪ್ರಯೋಗಾಲಯ ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿ ಉದ್ಘಾಟಿಸಿದರು.
ಸನ್ಮಾನ
ವಿಶೇಷ ಆಹ್ವಾನಿತರಾದ ಪದ್ಮಶ್ರೀ, ಶಿಕ್ಷಣ ಸಂತ ಹರೇಕಳ ಹಾಜಬ್ಬ ಹಾಗೂ ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಪಿ.ಬಿ.ಹರೀಶ್ ರೈ ಅವರನ್ನು ಕಾಲೇಜು ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು. ಉಚಿತ ಶೈಕ್ಷಣಿಕ ಸಮಾಲೋಚನೆಯಲ್ಲಿ ನೋಂದಾಯಿಸಿದ ವಿದ್ಯಾರ್ಥಿಗಳಿಗೆ ಬಹುಮಾನವಾಗಿ ನೀಡುವ ಟಿ.ಶರ್ಟ್ ನ್ನು ಸಂಸ್ಥೆಯ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ ಅನಾವರಣ ಮಾಡಿದರು. ವಿದ್ವತ್ ಕಾಲೇಜು ಕಾರ್ಯದರ್ಶಿ ಪ್ರಜ್ವಲ್ ರೈ, ಟ್ರಸ್ಟಿಗಳಾದ ಎಂ.ಕೆ.ಕಾಶಿನಾತ್, ಸುಚಿತ್ರಾ ಶೆಟ್ಟಿ, ರೇಶ್ಮಾ ಸುಭಾಶ್ಚಂದ್ರ ಶೆಟ್ಟಿ, ಆಡಳಿತಾಧಿಕಾರಿ ಅಶೋಕ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಶೈಕ್ಷಣಿಕ ನಿರ್ದೇಶಕ ಗಂಗಾಧ ಇ ಮಂಡಗಳಲೆ ಸ್ವಾಗತಿಸಿದರು. ರಸಾಯನಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರತಾಪ್ ಬಾಬು ಡಿ.ಎಂ. ಪ್ರಾಸ್ತಾವಿಸಿ ಮಾತನಾಡಿದರು. ಕಾಲೇಜು ಪ್ರಾಂಶುಪಾಲರಾದ ಹರೀಶ್ ಕೆ.ಆರ್. ವಂದಿಸಿದರು. ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು. ಅತಿಥಿಗಳ ಸಂದೇಶ ಪತ್ರವನ್ನು ಪಿ.ಆರ್.ಒ. ಚೈತ್ರೇಶ್ ಸಿ. ವಾಚಿಸಿದರು.
*


