ಮಂಗಳೂರು: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ದಕ್ಷಿಣ ಕನ್ನಡ ಜಿಲ್ಲೆ, ತಾಲೂಕು ಆರೋಗ್ಯಾಧಿಕಾರಿ ಕಚೇರಿ ಮಂಗಳೂರು ಹಾಗೂ ಫಾದರ್ ಮುಲ್ಲರ್ ಮೆಡಿಕಲ್ ಮತ್ತು ನರ್ಸಿಂಗ್ ಕಾಲೇಜು ಕಂಕನಾಡಿ ಸಂಯುಕ್ತ ಆಶ್ರಯದಲ್ಲಿ ಬುಧವಾರ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಡೆಸಿನಿಯಲ್ ಮೆಮೋರಿಯಲ್ ಸಭಾಂಗಣದಲ್ಲಿ ನಡೆಯಿತು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರಾದ ಜೈಬುನ್ನಿಸಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿಮಾನಸಿಕ ಖಾಯಿಲೆಗಳನ್ನು ಮೊದಲ ಹಂತದಲ್ಲಿಯೇ ಪತ್ತೆ ಹಚ್ಚಿ ಸರಿಯಾದ ಚಿಕಿತ್ಸೆ/ ಸಮಾಲೋಚನೆ ಮೂಲಕ ಕಾಯಿಲೆಯಿಂದ ಮುಕ್ತರನ್ನಾಗಿಸಬೇಕು. ಜಿಲ್ಲೆಯಲ್ಲಿ ಮಾನಸಿಕ ಆರೋಗ್ಯ ವಿಭಾಗದ ಮೂಲಕ ಮಾನಸಿಕ ಕಾಯಿಲೆಗಳ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ವೆನ್‍ಲಾಕ್ ಅಧೀಕ್ಷಕ ಡಾ.ಶಿವಪ್ರಕಾಶ್ ಮಾತನಾಡಿ, ಯುವಜನತೆ ಸಾಮಾಜಿಕ ಜಾಲತಾಣಗಳ ಮೂಲಕ ಕೆಲವು ಹವ್ಯಾಸಗಳಿಗೆ ಬಲಿಯಾಗಿ ಮಾನಸಿಕ ಖಿನ್ನತೆಗೆ ಒಳಗಾಗುವುದು ಹೆಚ್ಚಾಗುತ್ತಿದೆ ಎಂದು ಹೇಳಿದರು.
ಫಾದರ್ ಮುಲ್ಲರ್ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ನಿರ್ದೇಶಕ ಫಾದರ್ ಫಾಸ್ಟಿನ್ ಲೂಕಸ್ ಲೋಬೋ ಅವರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗದ ಡಾ.ಸುದರ್ಶನ್ , ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಡಾ.ಮೈಕಲ್ ಸಾಂತು ಮಯೂರ್, ಮನೋರೋಗ ತಜ್ಞೆ ಡಾ.ಪ್ರಜಕ್ತಾ ವಿ ರಾವ್, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಡಾ.ರಾಹುಲ್ ಎಮ್.ರಾವ್ ಉಪಸ್ಥಿತರಿದ್ದರು. ಸಂಸ್ಥೆಯ ಪ್ರಾಧ್ಯಾಪಕಿ ಡಾ.ಸುಪ್ರಿಯಾ ಹೆಗ್ಡೆ ಸ್ವಾಗತಿಸಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ ಉಳ್ಳೆಪಾಡಿ ವಂದಿಸಿದರು.


