24.5 C
Karnataka
Thursday, April 30, 2026

ಉದ್ಯೋಗ ಸ್ಥಳದಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣ ಅಗತ್ಯ

ಮಂಗಳೂರು; ಮಹಿಳೆಯರಿಗೆ ಕೆಲಸದ ಸ್ಥಳದಲ್ಲಿ ಸುರಕ್ಷಿತ ವಾತಾವರಣವನ್ನು ಕಲ್ಪಿಸುವುದರಿಂದ ಅವರು ಸಮರ್ಥವಾಗಿ ಜವಾಬ್ದಾರಿಗಳನ್ನು ನಿರ್ವಹಿಸಬಲ್ಲರು. ಕೆಲಸದ ಸ್ಥಳಗಳಲ್ಲಿ ಅನೇಕ ಮಹಿಳೆಯರು ಲೈಂಗಿಕ ಕಿರುಕುಳ ಅನುಭವಿಸುತ್ತಿದ್ದು, ಸಮಸ್ಯೆಯನ್ನು ಇನ್ನೊಬ್ಬರ ಬಳಿ ಹೇಳಿಕೊಳ್ಳಲಾಗದೆ ಮಾನಸಿಕ ಒತ್ತಡ ಅನುಭವಿಸುತ್ತಿದ್ದಾರೆ. ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳವನ್ನು ಎದುರಿಸಿದರೆ ಆಂತರಿಕ ದೂರು ಸಮಿತಿಗೆ ದೂರು ನೀಡಬೇಕು ಎಂದು ಕರ್ನಾಟಕ ಬ್ಯಾಂಕ್ ಮುಖ್ಯ ವ್ಯವಸ್ಥಾಪಕಿ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಪಲ್ಲವಿ ಟಿ. ಎಸ್ ಹೇಳಿದರು.
ಅವರು ನಗರದ ಮಲ್ಲಿಕಟ್ಟೆ ಲಯನ್ಸ್ ಸೇವಾ ಮಂದಿರದಲ್ಲಿ ಶುಕ್ರವಾರ ನಡೆದ ಸ್ಥಳೀಯ ದೂರು ಸಮಿತಿ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದ. ಕ, ಮನಶಾಂತಿ ಸಮಾಲೋಚನೆ, ಸಂಶೋಧನೆ ಮತ್ತು ತರಬೇತಿ ಕೇಂದ್ರ, ಲಯನ್ಸ್ ಕ್ಲಬ್ ಮಂಗಳೂರು ಇವರ ಸಹಕಾರದೊಂದಿಗೆ, ಕರ್ನಾಟಕ ಬ್ಯಾಂಕ್ ಲಿಮಿಟೆಡ್ ಪ್ರಾಯೋಜಕತ್ವದಲ್ಲಿ ಕೆಲಸದ ಸ್ಥಳಗಳಲ್ಲಿನ ಲೈಂಗಿಕ ಕಿರುಕುಳದಿಂದಾಗಿ ಮಹಿಳೆಯರ ಮಾನಸಿಕ ಆರೋಗ್ಯದ ಮೇಲೆ ಬೀರುವ ಪರಿಣಾಮಗಳು ಕಾಯ್ದೆ 2013 ರ ಕುರಿತು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಲೈಂಗಿಕ ಕಿರುಕುಳಗಳು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ದೌರ್ಜನ್ಯದ ಬಗ್ಗೆ ಮೌನವಾಗಿರದೆ ಸಮಸ್ಯೆಯನ್ನು ಎದುರಿಸಿ ಪರಿಹರಿಸಿಕೊಳ್ಳಬೇಕು. ಮಹಿಳೆಯರಿಗೂ ಗೌರವಯುತವಾದ ಕೆಲಸ ಮಾಡುವ ಹಕ್ಕು ಒದಗಿಸಬೇಕು ಎಂದು ಅವರು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಲೈಂಗಿಕ ಕಿರುಕುಳ ಮಾನಸಿಕವಾಗಿ, ದೈಹಿಕವಾಗಿ ಗಂಭೀರ ಪರಿಣಾಮ ಬೀರುತ್ತದೆ. ಲೈಂಗಿಕ ಕಿರುಕುಳ ಆಗದಂತೆ ಮಹಿಳೆಯರಿಗೆ ರಕ್ಷಣೆ ನೀಡಲು ಎಲ್ಲಾ ಕಚೇರಿಗಳಲ್ಲಿ ಆಂತರಿಕ ದೂರು ಸಮಿತಿಯನ್ನು ಕಡ್ಡಾಯವಾಗಿ ರಚಿಸಬೇಕು.ಅಶ್ಲೀಲ ಪದ ಬಳಕೆ, ಅಶ್ಲೀಲ ವರ್ತನೆ, ಅಸಹ್ಯಕರ ದೈಹಿಕ ವರ್ತನೆ ಇಂತಹ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರು ಮುಜುಗರಪಡದೆ ಆಂತರಿಕ ದೂರು ಸಮಿತಿಗೆ ದೂರು ನೀಡಿ ಸಮಸ್ಯೆಯನ್ನು ಪರಿಹರಿಸುವ ಮೂಲಕ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ರಾಜೇಶ್ ಕಾಮತ್, ಹರೀಶ್ ಅಡ್ಯಾರ್, ಸ್ಥಳೀಯ ದೂರು ಸಮಿತಿ ಅಧ್ಯಕ್ಷೆ ಡಾ.ರಮೀಳಾ ಶೇಖರ್, ಸ್ಥಳೀಯ ದೂರು ಸಮಿತಿ ಸದಸ್ಯೆ ಮೆರ್ಲಿನ್ ಮಾರ್ಟಿಸ್, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕಿ ಡಾ.ಅರಣಾ ಯಡಿಯಾಳ್ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles